Home News ಮಣ್ಣಿನ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ

ಮಣ್ಣಿನ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ

0

ರೈತರ ಜಮೀನುಗಳಲ್ಲಿನ ಮಣ್ಣಿನ ಫಲವತ್ತತೆ, ಪೋಷಕಾಂಶ, ಸಾರ ಮುಂತಾದ ಅಂಶಗಳನ್ನು ಪತ್ತೆ ಹಚ್ಚಿ ಮಣ್ಣಿನ ಆರೋಗ್ಯದ ಸ್ಥಿತಿಗತಿಗಳ ಕುರಿತು ವಿಶ್ಲೇಷಣೆ ಮಾಡಿ ತಿಳಿದುಕೊಳ್ಳುವುದು ಅತ್ಯವಶ್ಯಕ ಎಂದು ಪ್ರಗತಿಪರ ರೈತ ಹಿತ್ತಲಹಳ್ಳಿ ಗೋಪಾಲಗೌಡ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ವಿಶ್ವ ಮಣ್ಣಿನ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಣ್ಣಿನ ಫಲವತ್ತತೆಯನ್ನು ಆಧರಿಸಿ ರಸಗೊಬ್ಬರಗಳನ್ನು ಬಳಸುವುದರಿಂದ ಅಧಿಕ ಇಳುವರಿ ಪಡೆಯಬಹುದು. ರೈತರು ಕೃಷಿ ಮಾಡುವುದು ಬಹಳಷ್ಟು ದುಬಾರಿಯಾಗಿರುವ ಇಂದಿನ ದಿನಗಳಲ್ಲಿ ಸರ್ಕಾರ ಚಿಂತನೆ ಮಾಡಿ ರೈತರು ಕಡಿಮೆ ವೆಚ್ಚದಲ್ಲಿ ಕೃಷಿ ಮಾಡುವ ಮೂಲಕ ಹೆಚ್ಚಿನ ಲಾಭ ಪಡೆಯಬೇಕು. ಉತ್ತಮ ಹಾಗು ಗುಣಮಟ್ಟದ ಕೃಷಿ ಮಾಡಿದಾಗ ಮಾತ್ರ ಕೃಷಿ ಕ್ಷೇತ್ರ ಲಾಭದಾಯಕವಾಗುತ್ತದೆ ಎಂಬ ಉದ್ದೇಶದಿಂದ ಮಣ್ಣು ಪರೀಕ್ಷೆಯ ಅಗತ್ಯತೆಯನ್ನು ತಿಳಿಸಲಾಗುತ್ತಿದೆ ಎಂದರು.
ಕೃಷಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಮುರಳೀಧರ್ ಮಾತನಾಡಿ, ಪ್ರತಿಯೊಬ್ಬ ರೈತರೂ ಮಣ್ಣಿನ ಪರೀಕ್ಷೆಯನ್ನು ಖಡ್ಡಾಯವಾಗಿ ಮಾಡಿಸಬೇಕು. ಮಣ್ಣಿನ ಪರೀಕ್ಷೆಯ ಅಂಕಿ ಅಂಶಗಳನ್ನು ಗಣಕೀಕೃತಗೊಳಿಸಲಾಗುತ್ತದೆ. ಇದರಿಂದ ರೈತರು ಯಾವ ಬೆಳೆ ಬೆಳೆಯಬಹುದು, ಅದಕ್ಕೆ ಬೇಕಾಗುವ ಪೌಷ್ಠಿಕಾಂಶಗಳೇನು ಮತ್ತು ಕಾಲಾನುಕ್ರಮದಲ್ಲಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ರೈತರು ಮಾಹಿತಿ ಪಡೆದುಕೊಳ್ಳಬೇಕು ಎಂದರು.
ಇದೀಗ ದಿನೇ ದಿನೇ ಮಣ್ಣು ವಿವಿಧ ಮಾಲಿನ್ಯದಿಂದ ಕಲುಷಿತಗೊಳ್ಳುತ್ತಿದೆ. ಮಣ್ಣಿನ ಸವಕಳಿ ಹೆಚ್ಚಾದಂತೆ ಮಣ್ಣಿನಲ್ಲಿರಬೇಕಾದ ಪೋಷಕಾಂಶ ಮಟ್ಟ ಕಡಿಮೆಯಾಗುತ್ತದೆ. ಮಣ್ಣಿನ ಗುಣಮಟ್ಟದಲ್ಲಿ ವ್ಯತ್ಯಾಸವುಂಟಾದರೆ ಅದು ನಾವು ಸೇವಿಸುವ ಆಹಾರ, ನೀರು, ಗಾಳಿಯ ಮೇಲೆ ಪರಿಣಾಮ ಬೀರಿ ಪರಿಸರ ಹಾಳಾಗುತ್ತದೆ. ಆದ್ದರಿಂದ ಕಾಲ ಕಾಲಕ್ಕೆ ಮಣ್ಣಿನ ಪರೀಕ್ಷೆ ಮಾಡಿಸುವ ಮೂಲಕ ಗುಣಮಟ್ಟದ ಬೆಳೆ ಬೆಳೆದು ರೈತರು ಆರ್ಥಿಕವಾಗಿ ಮುಂದುವರೆಯಬೇಕು ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕಿನ ಹಲವು ರೈತರ ಜಮೀನಿನ ಮಣ್ಣಿನ ಪರೀಕ್ಷೆ ಮಾಡಿಸಿರುವ ಮಣ್ಣು ಆರೋಗ್ಯ ಚೀಟಿ ವಿತರಿಸಲಾಯಿತು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ, ರೈತ ಮುಖಂಡರಾದ ಬೆಳ್ಳೂಟಿ ಕೆಂಪಣ್ಣ, ತಾದೂರು ಮಂಜುನಾಥ್, ಪ್ರದೀಪ್ ಕಾರ್ಯಕ್ರಮದಲ್ಲಿ ಹಾಜರಿದ್ದರು.