ಪಟ್ಟಣದ ಅಮೀರ್ ಭಾಬಾ ದರ್ಗಾ ಹತ್ತಿರ ಬುಧವಾರ ಹೈದರಾಲಿ ಗರಡಿ ವತಿಯಿಂದ ನಡೆಸಿದ ಐದನೇ ವರ್ಷದ ಕುಸ್ತಿ ಪಂದ್ಯಾವಳಿಯು ರೋಚಕವಾಗಿದ್ದು ಜನರು ಉತ್ಸಾಹದಿಂದ ವೀಕ್ಷಿಸಿದರು.
ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಹಾಸನ, ಮೈಸೂರು, ಹುಬ್ಬಳ್ಳಿ, ಚಿತ್ರದುರ್ಗ, ದಾವಣಗೆರೆ, ಬೀದರ್, ಗುಲ್ಬರ್ಗಾ, ಕೋಲಾರ, ಹರಿಹರ, ಬೆಂಗಳೂರು ಮುಂತಾದೆಡೆಗಳಿಂದ ಪೈಲ್ವಾನರು ಆಗಮಿಸಿದ್ದರು.
ಮರಿ ಪೈಲ್ವಾನರು ಒಂದೆಡೆ ಸೆಣಸಿ ಜನರಿಂದ ಮೆಚ್ಚುಗೆ ಪಡೆದರೆ, ಮದಗಜಗಳಂತಿದ್ದ ಪೈಲ್ವಾನರು ಮಾರ್ಪೀಟ್ ನಡೆಸಿ ಜನರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದರು.
ಕುಸ್ತಿ ನಡೆಯುವ ಸ್ಥಳದಲ್ಲಿ ಜನರು ಕಿಕ್ಕಿರಿದು ನಿಂತಿದ್ದಲ್ಲದೆ, ಸುತ್ತಮುತ್ತಲಿನ ಕಟ್ಟಡಗಳು ಹಾಗೂ ಮರದ ಮೇಲೆಲ್ಲಾ ಜನರಿದ್ದು ಕುಸ್ತಿಯನ್ನು ಆಸ್ವಾದಿಸಿದರು. ಚಪ್ಪಾಳೆ, ಶಿಳ್ಳೆ ಹೊಡೆದು ಹುರಿದುಂಬಿಸಿದರು. ಗೆದ್ದವರನ್ನು ಅಭಿನಂದಿಸಿದರು. ವಿಜೇತರಿಗೆ ಪ್ರೋತ್ಸಾಹಿಸಲು ಕೆಲವರು ಬಹುಮಾನ ಹಣವನ್ನು ಘೋಷಿಸುತ್ತಿದ್ದರು. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ ಕುಸ್ತಿ ಪಟುಗಳು ವಿವಿಧ ಕಸರತ್ತು ಹಾಗೂ ಕೈ ಚಳಕದೊಂದಿಗೆ ಸ್ಥಳೀಯ ಕುಸ್ತಿ ಪಟುಗಳೊಂದಿಗೆ ಕುಸ್ತಿ ನಡೆಸಿದರು. ಪರಸ್ಪರರು ಬಗ್ಗಿಸಲು ಮತ್ತು ಹೆಣೆಯಲು ನಡೆಸಿದ ತಂತ್ರ ಮತ್ತು ಪ್ರತಿ ತಂತ್ರದ ಕುಸ್ತಿ ಪಟುಗಳು ನೋಡುಗರ ಮೈನವಿರೇಳಿಸಿದವು. ಸೂಕ್ಷ್ಮ ಹೋರಾಟದ ಕ್ಷಣಗಳಲ್ಲಿ ಉತ್ತೇಜಿಸುವ ಜೈಕಾರ ಕೇಳಿ ಬಂದಿತು. ವಿಜೇತರಾದಾಗ ಅಭಿಮಾನಿಗಳು ಸಂತಸದಿಂದ ಕೇಕೆ ಹಾಕಿ ಕೂಗಿ ಕುಣಿದಾಡಿದ ದೃಶ್ಯ ಸಹ ಕಂಡುಬಂತು.
ಕೆಮ್ಮಣ್ಣಿನಿಂದ ನಿರ್ಮಿಸಿದ್ದ ಎತ್ತರದ ಕುಸ್ತಿ ಅಖಾಡದ ಸುತ್ತಲೂ ನೆರೆದಿದ್ದ ನೂರಾರು ಜನರು ಕುಸ್ತಿ ಪಟುಗಳ ಪ್ರತಿಯೊಂದು ಪಟ್ಟನ್ನೂ ಕಣ್ಣು ಮಿಟುಕಿಸದೆ ಕಣ್ತುಂಬಿಕೊಂಡು ರೋಮಾಂಚನಗೊಂಡರು. ಆಹ್ವಾನಿತ ಪೈಲ್ವಾನರಿಗಿಂತ ತಾವೇನೂ ಕಡಿಮೆಯಿಲ್ಲ ಎಂಬಂತೆ ಸ್ಥಳೀಯ ಪೈಲ್ವಾನರು ಕೂಡ ಸೆಣಸಿ ಸೈ ಎನಿಸಿಕೊಂಡರು.
ಭಾಗವಹಿಸಿದ್ದ ಎಲ್ಲಾ ಪೈಲ್ವಾನರಿಗೂ ಪದಕ ಹಾಗೂ ಹೂವಿನ ಹಾರವನ್ನು ಹಾಕಿ ಹೈದರಾಲಿ ಗರಡಿ ವತಿಯಿಂದ ಅಭಿನಂದಿಸಿದ್ದಲ್ಲದೆ, ವಿಶೇಷ ಮಾರ್ಪೀಟ್ನಲ್ಲಿ ಗೆದ್ದವರಿಗೆ ನಗದು ಹಣ ಮತ್ತು ಟ್ರೋಫಿ ನೀಡಿದರು.
ಗೌಸ್ಪೀರ್ಸಾಬ್, ಎಂ.ಡಿ.ಮೌಲ, ಮುಕ್ತಿಯಾರ್ ಪಾಷ, ತಮೀಮ್, ಅಫ್ಜಲ್, ಅಮ್ಜು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.