ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ತಾಲ್ಲೂಕು ಘಟಕ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಮಹೋತ್ಸವದ ಅಂಗವಾಗಿ ನಗರದ ಹೊರವಲಯದ ಮಯೂರ ವೃತ್ತದ ಬಳಿಯಿರುವ ವಾಲ್ಮೀಕಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಿರ್ಮಾಣದ ಹಂತದಲ್ಲಿರುವ ವಾಲ್ಮೀಕಿ ಸಮುದಾಯಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಬಜೆಟ್ ನಲ್ಲಿ ಹಣವನ್ನು ಮೀಸಲಿಟ್ಟು ಸರಿಯಾಗಿ ವಿತರಣೆ ಮಾಡಿರುವುದರಲ್ಲಿ ಕರ್ನಾಟಕ ರಾಜ್ಯ ಇಡೀ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಬಡವರು ಹಾಗೂ ಹಿಂದುಳಿದವರಿಗಾಗಿ ಸರ್ಕಾರ ಮಾಡಿರುವ ಉಚಿತ ವಸತಿ ಶಾಲೆಗಳು ಶೈಕ್ಷಣಿಕ ಪ್ರಗತಿಗೆ ಕಾರಣವಾಗಿದೆ ಎಂದು ಅವರು ತಿಳಿಸಿದರು.
ವಾಲ್ಮೀಕಿ ವಿರಚಿತ ರಾಮಾಯಣ ಮಹಾಕಾವ್ಯ ಇಂದಿಗೂ ತನ್ನ ಹಿರಿಮೆಯನ್ನು ಕಾಯ್ದಿರಿಸಿಕೊಂಡಿದೆ. ಅವರು ಹುಟ್ಟಿನಿಂದ ನಿರ್ಧಿಷ್ಟ ಜಾತಿಗೆ ಸೇರಿದ್ದಾದರೂ ಎಲ್ಲಾ ಸಮುದಾಯಕ್ಕೂ ಸೇರಿದವರು. ಭಾರತೀಯ ಚರಿತ್ರೆ ಮತ್ತು ಸಂಸ್ಕೃತಿಯಲ್ಲಿ ಮಹರ್ಷಿ ವಾಲ್ಮೀಕಿಯದು ಎತ್ತರದ ವ್ಯಕ್ತಿತ್ವ. ತನ್ನ ಬದುಕಿನಲ್ಲಿ ನೋವುಂಡರೂ ಸಿಹಿ ಹಂಚಿದ ಶ್ರೇಷ್ಠ ಸಾಧಕ. ಭಾರತೀಯ ಬದುಕಿನ ಆದರ್ಶವನ್ನು ಮೌಲ್ಯವನ್ನು ಕಾವ್ಯದ ಮೂಲಕ ಕಟ್ಟಿಕೊಟ್ಟ ಮಹಾನ್ ಕವಿ ಮತ್ತು ದಾರ್ಶನಿಕ. ಸಮಾಜಕ್ಕೆ ಬೇಕಾದ ಬದ್ಧತೆಯ ಸತ್ವತತ್ವ ಮತ್ತು ಸಿದ್ಧಾಂತವನ್ನು ರಾಮಾಯಣ ನೀಡಿರುವುದರಿಂದ ಇದು ಜನಸಂಸ್ಕೃತಿಯ ಮಹಾಕಾವ್ಯವಾಗಿದೆ ಎಂದರು.
ಸಮುದಾಯದ ಏಳಿಗೆಗಾಗಿ ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ತಾಲ್ಲೂಕಿಗೊಂದರಂತೆ ವಾಲ್ಮೀಕಿ ಭವನ ನಿಮಾಣ ಹಾಗೂ ಹೋಬಳಿಗೊಂದರಂತೆ ವಾಲ್ಮೀಕಿ, ಮೊರಾರ್ಜಿ ವಸತಿಶಾಲೆಗಳನ್ನು ನಿರ್ಮಿಸಲು ಕ್ರಮ ಜರುಗಿಸಿದೆ. ಸಮುದಾಯದ ಮಕ್ಕಳು ಉತ್ತಮ ವಿಧ್ಯಾಭ್ಯಾಸ ಮಾಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ಮುಖಂಡ ಮೇಲೂರು ರವಿಕುಮಾರ್ ಮಾತನಾಡಿ, ಸಮುದಾಯಗಳ ನಡುವೆ ರಾಜಕೀಯ ನುಸುಳಿದರೆ ಒಡಕು ಸೃಷ್ಟಿಯಾಗುತ್ತದೆ. ಅದಕ್ಕೆ ಆಸ್ಪದ ನೀಡಬೇಡಿ. ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಇದುವರೆಗೂ ಶಿಡ್ಲಘಟ್ಟದಲ್ಲಿ ವಿಶೇಷವಾಗಿ ಇತರರು ಮೆಚ್ಚುವಂತೆ ಆಚರಿಸಿಕೊಂಡು ಬರಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಒಗ್ಗಟ್ಟಾಗಿರುವ ಸಮುದಾಯವನ್ನು ಒಡೆಯುವ ಪ್ರಯತ್ನ ನಡೆದಿದೆ. ಅದು ಆಗದಂತೆ ನೋಡಿಕೊಳ್ಳಿ. ಒಗ್ಗಟ್ಟಿನಿಂದ ಸಮುದಾಯದ ಅಭಿವೃದ್ಧಿ ಕೆಲಸಗಳಿಗೆ ಕೈಜೋಡಿಸಿ. ನಾವೂ ಅಭಿವೃದ್ಧಿ ಕಾರ್ಯದಲ್ಲಿ ನಿಮ್ಮೊಂದಿಗೆ ಇರುವುದಾಗಿ ಹೇಳಿದರು.
ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ಜಿಲ್ಲಾಧ್ಯಕ್ಷ ಬಂಕ್ ಮುನಿಯಪ್ಪ ಮಾತನಾಡಿ, ಸಮಾಜದಲ್ಲಿನ ಮೌಢ್ಯತೆಯನ್ನು ತೊಲಗಿಸಿ, ಜನರ ಮನದಾಳದ ಅಂಧಕಾರವನ್ನು ತೊಲಗಿಸುವ ನಿಟ್ಟಿನಲ್ಲಿ ಜನಿಸಿದ ಅನೇಕ ಮಂದಿ ಸಾಧು, ಸಂತರು, ದಾರ್ಶನಿಕರು, ಕವಿಗಳು, ಸಾಹಿತಿಗಳಿಗೆಲ್ಲಾ ಮಾರ್ಗದರ್ಶನ ಮಾಡುವಂತಹ ರೀತಿಯಲ್ಲಿ ಸಂತರಾಗಿ, ದಾರ್ಶನಿಕ ಕವಿಗಳಾಗಿ ಉನ್ನತ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದ ಮಹರ್ಷಿ ವಾಲ್ಮೀಕಿಯವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದರು.
ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲ್ಲೂಕು ಅಧ್ಯಕ್ಷ ರಾಮಚಂದ್ರಪ್ಪ, ತಹಶೀಲ್ದಾರ್ ಅಜಿತ್ ಕುಮಾರ್ ರೈ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ಸದಸ್ಯ ರಾಜಶೇಖರ್, ತಾದೂರು ರಘು, ಜಿಲ್ಲಾ ಪಂಚಾಯಿತಿ ಸದಸ್ಯ ಸತೀಶ್, ಎ.ನಾಗರಾಜು, ಲಕ್ಷ್ಮೀನಾರಾಯಣ, ಹುಜಗೂರು ರಾಮಣ್ಣ, ಜಗನ್ನಾಥ್, ನಗರಸಭೆ ಸದಸ್ಯರಾದ ಚಿಕ್ಕಮುನಿಯಪ್ಪ, ಕಿಶನ್, ಜಬೀವುಲ್ಲ ಹಾಜರಿದ್ದರು.