ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು. ತಮ್ಮ ಕೌಶಲ್ಯದ ಮೂಲಕ ಮನೆಯಲ್ಲಿದ್ದರೂ ಹಣ ಸಂಪಾದಿಸುವಂತಾಗಬೇಕು. ಆಗ ಪ್ರತಿಯೊಂದು ಕುಟುಂಬವೂ ಸಶಕ್ತವಾಗುತ್ತದೆ ಎಂದು ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಪುಟ್ಟು ತಿಳಿಸಿದರು.
ನಗರದ ವಾಸವಿ ಶಾಲೆಯ ಆವರಣದಲ್ಲಿ ಭಾನುವಾರ ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ಇಂದಿರಾಗಾಂಧಿ ಸವಿನೆನಪಿನಲ್ಲಿ ತಾಲ್ಲೂಕಿನ 600 ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ವಿತರಿಸಿ ಅವರು ಮಾತನಾಡಿದರು.
ಸರ್ಕಾರದಿಂದ ತಾಲ್ಲೂಕಿನ ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ಬಳಸುವ ಕೌಶಲ್ಯ ತರಬೇತಿಯನ್ನು ನೀಡಲಾಗಿದೆ. ಆದರೆ ಹೊಲಿಗೆ ಯಂತ್ರವನ್ನು ಕೊಳ್ಳುವ ಸ್ಥಿತಿಯಲ್ಲಿ ಬಹುತೇಕ ಹೆಣ್ಣುಮಕ್ಕಳು ಇಲ್ಲದಿರುವುದು ಮನೆಮನೆ ಭೇಟಿ ಕೊಟ್ಟಾಗ ತಿಳಿದುಬಂದಿತು. ಈ ನ್ಯೂನತೆಯನ್ನು ಸರಿಪಡಿಸಿ ಹೆಣ್ಣುಮಕ್ಕಳು ತಮ್ಮ ಕಾಲ ಮೇಲೆ ನಿಂತು ಆತ್ಮವಿಶ್ವಾಸ ಹೊಂದುವಂತೆ ಮಾಡುವ ನಿಟ್ಟಿನಲ್ಲಿ ಈಗ 600 ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ವಿತರಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ನೀಡುವುದಾಗಿ ಹೇಳಿದರು.

ಚುನಾವಣೆ ಸಮೀಪಿಸುತ್ತಿದೆ. ನಿಮ್ಮ ಮತ ನಿಮ್ಮ ಹಕ್ಕು. ಆದರೂ ಜನರ ಸೇವಕನಾಗುವವರನ್ನು, ಕ್ಷೇತ್ರದ ಅಭಿವೃದ್ಧಿ ಮಾಡುವವರನ್ನು ಆಯ್ಕೆ ಮಾಡಿ. ಎಲ್ಲೋ ಬೆಂಗಳೂರಿನಲ್ಲಿ ನೆಲೆಸಿರುವವರನ್ನು ಅಥವಾ ಕರುಣೆಯಿಂದ ಮತಹಾಕದಿರಿ. ಜನಪ್ರತಿನಿಧಿಯಾದವರು ಮನೆಮನೆಗೂ ಭೇಟಿ ನೀಡಬೇಕು. ಜನರ ಕಷ್ಟ ಸುಖಕ್ಕೆ ಸ್ಪಂದಿಸಬೇಕು. ಅನಕ್ಷರಸ್ಥರು, ಬಡವರು, ಮಹಿಳೆಯರಿಗೆ ಸರ್ಕಾರದ ಯೋಜನೆಯು ತಲುಪಿಸುವವರಾಗಬೇಕು. ನಗರದಿಂದ ದೂರವಿರುವ ಹಳ್ಳಿಗಳ ಜನರಿಗೆ ವೈದ್ಯಕೀಯ ನೆರವು, ಮೂಲ ಭೂತ ಸವಲತ್ತುಗಳನ್ನು ಒದಗಿಸುವವರಾಗಬೇಕು. ನನ್ನನ್ನೂ ಸೇರಿದಂತೆ ಎಲ್ಲಾ ಅಭ್ಯರ್ಥಿಗಳನ್ನೂ ಪರಿಶೀಲಿಸಿ ನಿಮ್ಮ ಅಭಿವೃದ್ಧಿಗೆ ಶ್ರಮಿಸುವವರನ್ನು ನಿರ್ವಂಚನೆಯಿಂದ ಮತ ನೀಡಿ ಎಂದರು.
ಶೈಕ್ಷಣಿಕ ಅಭಿವೃದ್ಧಿಯ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಬಸ್ ಪಾಸ್, ನೋಟ್ ಪುಸ್ತಕಗಳು, ಕುಡಿಯುವ ನೀರಿನ ಬಾಟಲ್ಗಳು, ತರಬೇತಿ ಶಿಬಿರಗಳು, ಯುವಜನರಿಗೆ ಕೌಶಲ್ಯಾಭಿವೃದ್ಧಿ ಶಿಬಿರಗಳು, ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳು, ಉಚಿತ ಶಸ್ತ್ರಚಿಕಿತ್ಸೆಗಳು, ಅಂಗವಿಕಲರಿಗೆ ವೀಲ್ ಚೇರ್, 2000 ಮಂದಿಗೆ ಸರ್ಕಾರದ ಸೌಲಭ್ಯಗಳಾದ ವಿಧವಾ ವೇತನ, ಅಂಗವಿಕಲ ವೇತನ ಮತ್ತು ವೃದ್ಧಾಪ್ಯವೇತನಗಳನ್ನು ಮಾಡಿಸಿಕೊಟ್ಟು ಟ್ರಸ್ಟ್ ಮೂಲಕ ಜನರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಪ್ರತಿಯೊಂದು ಗ್ರಾಮಕ್ಕೂ ಮನೆಮನೆಗೂ ಭೇಟಿ ನೀಡಿ ಅವರ ನೋವು, ಕಷ್ಟ, ತೊಂದರೆಗಳನ್ನು ಆಲಿಸುವ ಕೆಲಸ ಮಾಡುತ್ತಿದ್ದೇನೆ. ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಮಹಿಳಾ ಆರ್ಥಿಕ ಸಬಲೀಕರಣ, ರಸ್ತೆ, ನೀರಿನ ಸಮಸ್ಯೆ ನಿವಾರಣೆಯ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ದುಡಿಯುವುದೇ ಗುರಿಯಾಗಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ 40 ಮಂದಿ ವೃದ್ಧರಿಗೆ ಶ್ರವಣಯಂತ್ರಗಳನ್ನು, 200 ಮಂದಿಗೆ ವೃದ್ಧಾಪ್ಯವೇತನದ ಪತ್ರಗಳನ್ನು ವಿತರಿಸಿ, ಚಿತ್ರಕಲಾ ಶಿಕ್ಷಕ ಶಿವರಾಜ್ಗೆ ಸನ್ಮಾನವನ್ನು ಮಾಡಲಾಯಿತು.
ಎಸ್.ಎನ್.ಕ್ರಿಯಾ ಟ್ರಸ್ಟ್ ಗೌರವಾಧ್ಯಕ್ಷ ಆನೂರು ದೇವರಾಜ್, ತಾಲ್ಲೂಕು ಪಂಚಾಯಿತಿ ಸದಸ್ಯ ಆನೂರು ದೇವರಾಜ್, ನರಸಿಂಹಪ್ಪ, ಕೃಷ್ಣಪ್ಪ, ಎಸ್.ವಿ.ಐಯ್ಯರ್. ಅಶ್ವತ್ಥನಾರಾಯಣ ಹಾಜರಿದ್ದರು.