Home News ಮಾನಸಿಕವಾಗಿ ನಾವು ಭ್ರಷ್ಟರಾಗದಿದ್ದಲ್ಲಿ ಬದುಕು ಸುಲಭ ಆಗುತ್ತದೆ – ಸಾಹಿತಿ ಎಸ್.ಎನ್.ಸೇತುರಾಮ್

ಮಾನಸಿಕವಾಗಿ ನಾವು ಭ್ರಷ್ಟರಾಗದಿದ್ದಲ್ಲಿ ಬದುಕು ಸುಲಭ ಆಗುತ್ತದೆ – ಸಾಹಿತಿ ಎಸ್.ಎನ್.ಸೇತುರಾಮ್

0

ನಗರದ ಕೆ.ಎಚ್.ಬಿ.ಕಾಲೋನಿಯ ನಿವಾಸಿ ನಿವೃತ್ತ ಶಿಕ್ಷಕ ಸುಂದರನ್ ಹಾಗೂ ರಮಾ ದಂಪತಿಗಳ ಮನೆಯಲ್ಲಿ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಆಯೋಜಿಸಿದ್ದ “ಚಾವಡಿಯಲ್ಲಿ ಚಿಂತನ ಮಂಥನ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಿರುತೆರೆಯ ಖ್ಯಾತ ನಟ, ನಿರ್ದೇಶಕ ಹಾಗೂ ಸಾಹಿತಿ ಎಸ್.ಎನ್.ಸೇತುರಾಮ್ ಮಾತನಾಡಿದರು.
ಮಾನಸಿಕವಾಗಿ ನಾವು ಭ್ರಷ್ಟರಾಗದಿದ್ದಲ್ಲಿ ಬದುಕು ಸುಲಭ ಆಗುತ್ತದೆ. ನಾವ್ಯಾರೂ ಹುಟ್ಟು ಭ್ರಷ್ಟರಲ್ಲ, ಸುಪ್ತಪ್ರಜ್ಞೆಗೆ ನ್ಯಾಯ ನೀತಿ ಧರ್ಮ ಗೊತ್ತಿದೆ. ಪ್ರಾಪಂಚಿಕ ಆಕರ್ಷಣೆಗಳು ನಮ್ಮನ್ನು ತಪ್ಪುದಾರಿಗೆ ಸೆಳೆಯುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಹಿಂದೆ ಸಾಹಿತಿಗಳ ಬದುಕು ಮತ್ತು ಬರಹ ಬೇರೆಯಾಗಿರಲಿಲ್ಲ. ಎರಡರಲ್ಲೂ ಪ್ರಾಮಾಣಿಕತೆಯಿರುತ್ತಿತ್ತು. ನಂತರದ ಕಾಲಘಟ್ಟದಲ್ಲಿ ಬದುಕು ಬೇರೆ ಮತ್ತು ಬರಹ ಬೇರೆಯಾಯ್ತು. ಅನಂತರದ ಕಾಲದಲ್ಲಿ ಸರ್ಕಾರದ ಪ್ರೋತ್ಸಾಹದ ಫಲವಾಗಿ ವಶೀಲಿಗಾಗಿ, ಗ್ರಂಥಾಲಯಕ್ಕಾಗಿ, ಪ್ರಶಸ್ತಿಗಾಗಿ ಬರವಣಿಗೆ ರೂಢಿಯಾಯ್ತು. ಅಭಿನಂದನಾ ಸಾಹಿತ್ಯ ಮತ್ತು ನಿಂದನಾ ಸಾಹಿತ್ಯ ಬಂದವು. ಸಾಹಿತ್ಯ ತೆಳ್ಳಗಾಯ್ತು. ಓದುವ ಪುಸ್ತಕಗಳು ಕಡಿಮೆಯಾದವು. ಸಾಹಿತ್ಯ ಬದುಕನ್ನು ಬಿಂಬಿಸಿದಾಗ ಜನರು ಓದುತ್ತಾರೆ. ಸಾಮಾನ್ಯ ಜನರಿಗೆ ಸುಳ್ಳು ಸತ್ಯ ಬಹು ಬೇಗ ಅರ್ಥವಾಗಬಲ್ಲದು. ಒಳಗೆ ಹೂರಣ ಬದಲಿಸದೆ ಕಡುಬಿನ ಆಕಾರ ಬದಲಿಸಿದರೆ ಏನು ತಾನೆ ಪ್ರಯೋಜನ ಎಂದು ಹೇಳಿದರು.
ಕಾಲೇಜುಗಳು ವಿದ್ಯಾರ್ಥಿಗಳನ್ನು ಕೆಲಸಕ್ಕೆ ತಯಾರು ಮಾಡುತ್ತವಾದ್ದರಿಂದ ಅಲ್ಲಿ ಕನ್ನಡ ಭಾಷೆ ಮುಖ್ಯವಾಗುತ್ತಿಲ್ಲ. ನಮ್ಮ ಬದುಕಿನ ಭಾಷೆಯಾದ ಕನ್ನಡದಿಂದ ಮಾತ್ರ ಭಾವವನ್ನು ಅಭಿವ್ಯಕ್ತಿಸಲು ಸಾಧ್ಯ. ಅನಕೃ ಅವರು ಹೇಳಿದಂತೆ ನಮ್ಮ ಗುರುತಿಗಾಗಿ ನಮ್ಮ ಭಾಷೆ ಮುಖ್ಯವಾಗುತ್ತದೆ. ಸರ್ಕಾರ ಕೈಹಾಕಿದ್ದು ಯಾವುದೂ ಸಂಪೂರ್ಣ ಅಭಿವೃದ್ಧಿ ಆಗಿಲ್ಲ. ಜನಸಾಮಾನ್ಯರ ಸಹಭಾಗಿತ್ವದಿಂದ ಊರ ದೇವರ ಜಾತ್ರೆ ವಿಜೃಂಭಿಸುತ್ತದೆ. ಇದು ಭಾಷೆ, ಸಂಸ್ಕೃತಿ, ಸಾಹಿತ್ಯಕ್ಕೂ ಅನ್ವಯಿಸುತ್ತದೆ. ಹೃದಯ ಜೀವಂತಿಕೆಯಿಂದ ಇರಬೇಕಾದರೆ ಕಲೆ ಬೇಕು ಎಂದರು.
ನಾನು ಬದುಕಿನಲ್ಲಿ ಕಂಡ ಹೆಣ್ಣುಮಕ್ಕಳಿಗೆ ಹಲವು ಸಮಸ್ಯೆಗಳಿದ್ದವು. ಇದ್ದಲ್ಲೇ ಬೇರು ಬಿಟ್ಟು ಮನೆಯನ್ನೇ ತಮ್ಮದಾಗಿಸಿಕೊಂಡರು. ಮನೆ ಬಿಟ್ಟು ಹೊರಹೋಗುವುದು ಸ್ತ್ರೀವಾದವಲ್ಲ. ಹಿಂದೆ ಹಂಪೆಯಲ್ಲಿ ಹಗಲಿನಲ್ಲಿ ಮಾರುತ್ತಿದ್ದ ಮುತ್ತು ರತ್ನಗಳನ್ನು ರಾತ್ರಿ ಹಾಗೇ ಮುಚ್ಚಿಟ್ಟು ಹೋಗುತ್ತಿದ್ದರಂತೆ. ಆದರೆ ಈಗ ರೈಲಿನ ಶೌಚಾಲಯದಲ್ಲಿ ತಗಡು ಡಬ್ಬಕ್ಕೆ ಚೈನ್ ಬಿಗಿದಿರುತ್ತಾರೆ. ತಳಿ ಅದೇ ಆದರೂ ನಾವ್ಯಾಕೆ ಕಳ್ಳರಾದೆವು? ಮಾನಸಿಕವಾಗಿ ಭ್ರಷ್ಟರಾದೆವಾ? ಪ್ರಜ್ಞೆಯಲ್ಲಿ ನಾವೆಲ್ಲಾ ಸಭ್ಯರೇ, ನಿರ್ವಾಹವಿಲ್ಲದೇ ಪಾಪದ ಕೆಲಸ ಮಾಡುತ್ತಿದ್ದೇವೆ, ಅದನ್ನು ಕಮ್ಮಿ ಮಾಡಬೇಕು ಎಂದು ನುಡಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ತಾವು ಭಾಷೆ, ದೇಶಪ್ರೇಮ, ಓದುವ ಅಭಿರುಚಿ ಬೆಳೆಸಲು ಮಾಡುತ್ತಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಸಾಹಿತಿ ಎಸ್.ಎನ್.ಸೇತುರಾಮ್, ಕವಿ, ಸಾಹಿತಿ ಶಾಂತಾರಾಮ್ ವಿ ಶೆಟ್ಟಿ, ತುಮಕೂರಿನ ಗೋಮಿನಿ ಪ್ರಕಾಶದ ಪ್ರಕಾಶಕ ಗುಬ್ಬಚ್ಚಿ ಸತೀಶ್, ನಿವೃತ್ತ ಶಿಕ್ಷಕ ಸುಂದರನ್ ಹಾಗೂ ರಮಾ ದಂಪತಿಯನ್ನು ಸನ್ಮಾನಿಸಲಾಯಿತು.
ನಗರಸಭಾ ಸದಸ್ಯೆ ಸುಗುಣಾ ಲಕ್ಷ್ಮೀನಾರಾಯಣ್, ಅಜಿತ್ ಕೌಂಡಿನ್ಯ, ನವ್ಯ, ಲಕ್ಷ್ಮೀನಾರಾಯಣ್, ಹೈಕೋರ್ಟ್ ವಕೀಲ ಮುನಿರಾಜು, ಚಂಪಾ ಸತೀಶ್, ಸಿನಿಮಾ ನಟ ಸಿ.ಎನ್.ಮುನಿರಾಜು, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಕಾರ್ಯದರ್ಶಿ ಸತೀಶ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್, ಅನಿಲ್ ಪದ್ಮಸಾಲಿ, ಸಾಹಿತಿಗಳಾದ ಚಂದ್ರಶೇಖರ್ ಹಡಪದ್, ಸುಂಡ್ರಳ್ಳಿ ಶ್ರೀನಿವಾಸಮೂರ್ತಿ, ಪ್ರೊ.ವೇಣುಗೋಪಾಲ್, ಶಿವರಾಂ, ಕಲಾಧರ್, ದೇವರಾಜ್, ವಿ.ವೆಂಕಟರಮಣ, ಕೃಷ್ಣಮೂರ್ತಿ, ಚಂದ್ರಶೇಖರ್, ನಾರಾಯಣ್, ಪ್ರಸಾದ್, ನಾಗರಾಜರಾವ್, ಪ್ರಸನ್ನಕುಮಾರಿ, ಸುರೇಶ್ ಹಾಜರಿದ್ದರು.

error: Content is protected !!