Home News ಮಾರುಕಟ್ಟೆ ಮತ್ತು ತರಬೇತಿ ಕಾರ್ಯಾಗಾರ ಮತ್ತು ಕಸಾಪ ನಡಿಗೆ ಸಾಧಕರ ಕಡೆಗೆ ಕಾರ್ಯಕ್ರಮ

ಮಾರುಕಟ್ಟೆ ಮತ್ತು ತರಬೇತಿ ಕಾರ್ಯಾಗಾರ ಮತ್ತು ಕಸಾಪ ನಡಿಗೆ ಸಾಧಕರ ಕಡೆಗೆ ಕಾರ್ಯಕ್ರಮ

0

ಹಳ್ಳಿಗಳ ಸಮೀಪದ ಮುಖ್ಯರಸ್ತೆಯ ಬದಿಯಲ್ಲಿ ಚಿಕ್ಕಚಿಕ್ಕ ಮಾರುಕಟ್ಟೆಯನ್ನು ರೂಪಿಸಿಕೊಂಡು ತಮ್ಮ ಉತ್ಪನ್ನಗಳನ್ನು ಮಾರಿದರೆ ಮಾತ್ರ ಸಣ್ಣ ರೈತರಿಗೆ ಉಳಿಗಾಲವಿದೆ ಎಂದು ರಾಜ್ಯ ಕೃಷಿ ಮಾರಾಟ ಮಂಡಳಿ ನಿವೃತ್ತ ಅಧಿಕಾರಿ ಬಚ್ಚೇಗೌಡ ತಿಳಿಸಿದರು.
ತಾಲ್ಲೂಕಿನ ಕಾಚಹಳ್ಳಿಯ ರೈತ ಮಹಿಳೆ ಶಾಂತಮ್ಮ ಅವರ ಮನೆಯ ಆವರಣದಲ್ಲಿ ಬುಧವಾರ ರಾಜ್ಯ ಕೃಷಿ ಮಾರಾಟ ಮಂಡಳಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸಿರಿ ಸಮೃದ್ಧ ರೈತಕೂಟ ಮತ್ತು ಭಾರತಾಂಬೆ ಮಹಿಳಾ ರೈತಕೂಟದ ಸಹಯೋಗದಲ್ಲಿ ನಡೆದ “ಮಾರುಕಟ್ಟೆ ಕಾರ್ಯಾಗಾರ ಮತ್ತು ತರಬೇತಿ ಕಾರ್ಯಾಗಾರ” ಮತ್ತು “ಕಸಾಪ ನಡಿಗೆ ಸಾಧಕರ ಕಡೆಗೆ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ನೆರೆಯ ಭೂತಾನ್ ದೇಶದಲ್ಲಿ ರಸ್ತೆ ಬದಿಯಲ್ಲಿ ಸರ್ಕಾರದ ವತಿಯಿಂದ ರೈತರ ಉತ್ಪನ್ನಗಳ ಮಾರಾಟಕ್ಕಾಗಿ ತಂಗುದಾಣಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಅದನ್ನು ಇಲ್ಲಿಯೂ ಅಳವಡಿಸಿಕೊಂಡರೆ ಮಧ್ಯವರ್ತಿಗಳು, ಬಾಡಿಗೆ, ಸುಂಕ, ಸಾಗಾಣಿಕೆಯ ವೆಚ್ಚ, ಕಮಿಷನ್ ಉಳಿಸಬಹುದು. ಸಣ್ಣ ರೈತರ ಆರ್ಥಿಕಮಟ್ಟ ಸುಧಾರಣೆಗೆ ದಾರಿಯಾಗುತ್ತದೆ. ಇದಕ್ಕೆ ರಾಜ್ಯ ಕೃಷಿ ಮಾರಾಟ ಮಂಡಳಿಯಿಂದಲೂ ನೆರವು ಸಿಗಲಿದೆ ಎಂದು ವಿವರಿಸಿದರು.
ರೇಷ್ಮೆ ಜಿಲ್ಲಾ ಉಪನಿರ್ದೇಶಕ ಬೈರಾರೆಡ್ಡಿ ಮಾತನಾಡಿ, ರೇಷ್ಮೆ ಬೆಳೆಗಾರರು ಬೈವೋಲ್ಟೀನ್ ಬೆಳೆಯಲು ಮನಸ್ಸು ಮಾಡಬೇಕು. ಆಗ ಮಾತ್ರ ನಾವು ಚೀನಾ ದೇಶದವರನ್ನು ರೇಷ್ಮೆಯಲ್ಲಿ ಮೀರಿಸಲು ಸಾಧ್ಯ. ಸರ್ಕಾರದ ಸಹಾಯಧನವನ್ನು ಪಡೆಯಲು ತೊಂದರೆಗಳಿದ್ದರೆ ತಿಳಿಸಿ, ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ, ಕೃಷಿಯಲ್ಲಿ ರೈತಮಹಿಳೆಯರ ಸಾಧನೆ ಪ್ರಮುಖವಾದದ್ದು. ಕನ್ನಡವು ಶ್ರಮಸಂಸ್ಕೃತಿಯನ್ನು ಒಳಗೊಂಡಿದೆ. ಹಳ್ಳಿಯ ಸೊಗಡು, ಜಾನಪದ ಉಳಿಸಿದರೆ ಮಾತ್ರ ಕನ್ನಡತನ ಉಳಿಯುತ್ತದೆ. ಕಸಾಪ ಪ್ರತಿಯೊಂದು ಹಳ್ಳಿಯನ್ನು, ಮನಮನದಲ್ಲೂ ಸೇರಬೇಕು ಎಂಬ ಉದ್ದೇಶದಿಂದ ಎಲೆಮರೆಯ ಕಾಯಿಯಂತಿರುವ ಸಾಧಕರನ್ನು ಗುರುತಿಸಿ ಗೌರವಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಕ್ರಾಂತಿ ಸುಗ್ಗಿ ರಾಶಿ ಪೂಜೆಯನ್ನು ನೆರವೇರಿಸಲಾಯಿತು. ಕಸಾಪ ತಾಲ್ಲೂಕು ಘಟಕದ ವತಿಯಿಂದ ಭಾರತಾಂಬೆ ರೈತಕೂಟದ ಅಧ್ಯಕ್ಷೆ ರತ್ನಮ್ಮ ಮತ್ತು ಮುನಿಯಪ್ಪ ದಂಪತಿಯನ್ನು ಗೌರವಿಸಲಾಯಿತು.
ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಎಚ್.ಜಿ.ಗೋಪಾಲಗೌಡ, ಆತ್ಮಾ ಯೋಜನಾಧಿಕಾರಿ ಅಶ್ವತ್ಥನಾರಾಯಣಗೌಡ, ಸಾವಯವ ಕೃಷಿಕ ವೆಂಕಟಸ್ವಾಮಿರೆಡ್ಡಿ, ಮಳ್ಳೂರು ಎಂ.ಎನ್.ಗೋಪಾಲಪ್ಪ, ಪಿಳ್ಳವೆಂಕಟಸ್ವಾಮಪ್ಪ, ನಾಗರಾಜ್, ರಾಮಮೂರ್ತಿ, ನಾಗೇಂದ್ರಪ್ರಸಾದ್, ನವೀನ್, ಮೂರ್ತಿ, ಕಸಾಪ ಪದಾಧಿಕಾರಿಗಳಾದ ಶಂಕರ್, ಮಂಜುನಾಥ್ ಹಾಜರಿದ್ದರು.

error: Content is protected !!