Home News ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜನ್ಮದಿನಾಚರಣೆ

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜನ್ಮದಿನಾಚರಣೆ

0

ತಾಲ್ಲೂಕಿನ ದೊಡ್ಡದಾಸೇನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಕಸಾಪ ವತಿಯಿಂದ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ಕನ್ನಡಕ್ಕೆ ಸಣ್ಣಕಥೆಗಳು ಎಂಬ ಮಹತ್ವದ ಪ್ರಕಾರವನ್ನು ಪರಿಚಯಿಸಿದವರು ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್. “ಮಾಸ್ತಿ, ಕನ್ನಡದ ಆಸ್ತಿ” ಎಂದೇ ಅವರನ್ನು ಹೆಮ್ಮೆಯಿಂದ ಸ್ಮರಿಸುವುದು ಕರ್ನಾಟಕದಲ್ಲಿ ಒಂದು ಪರಂಪರೆಯೇ ಆಗಿದೆ ಎಂದು ಅವರು ತಿಳಿಸಿದರು.
ಕನ್ನಡ ಸಾಹಿತ್ಯ ಪರಂಪರೆಯ ಶ್ರೇಷ್ಠ ನಿರ್ಮಾಪಕರುಗಳಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಮುಖರು. “ಶ್ರೀನಿವಾಸ” ಎಂಬುದು ಅವರ ಕಾವ್ಯನಾಮ. ಅವರ ಹೆಸರಿನ ಜೊತೆ ಇರುವ ಅವರ ಹುಟ್ಟೂರಿನ ಹೆಸರು “ಮಾಸ್ತಿ” ಅವರ ಕಾವ್ಯನಾಮದಂತೆಯೇ ಪ್ರಸಿದ್ಧಿ ಪಡೆದಿದೆ ಎಂದು ಹೇಳಿದರು.
ಮಾಸ್ತಿ ಅವರು ಕನ್ನಡಿಗರಿಗೆ ಒಂದು ಆದರ್ಶ. ಎಂಥ ಕಷ್ಟ ಕಾಲದಲ್ಲೂ ಅವರು ಜೀವನವನ್ನೆದುರಿಸಿದರು. ಸಾಹಿತ್ಯ ರಚಿಸಿದಂತೆಯೇ ಸಾಹಿತ್ಯ ಪೋಷಕರಾದರು. ಜಿ ಪಿ ರಾಜರತ್ನಂ, ದ ರಾ ಬೇಂದ್ರೆಯಂತಹವರಿಗೆ ಅವರು ಆದರ್ಶರಾಗಿದ್ದರು. ಅವರು ರಚಿಸಿದ ಕೃತಿಗಳ ಸಂಖ್ಯೆ ೧೨೩. ಅವರು ಬರೆದ ಕಾದಂಬರಿಗಳು ಎರಡು. ಜ್ಞಾನಪೀಠ ಪ್ರಶಸ್ತಿ ಗಳಿಸಿದ ಕೃತಿ ಚಿಕವೀರ ರಾಜೇಂದ್ರ – ಕೊಡಗಿನ ಕಡೆಯ ರಾಜ ಚಿಕವೀರ ರಾಜೇಂದ್ರನನ್ನು ಕುರಿತದ್ದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಕಸಾಪ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಗೌರವಿಸಿ, ಅಭಿನಂದನಾ ಪತ್ರ ಹಾಗೂ ಪುಸ್ತಕವನ್ನು ನೀಡಲಾಯಿತು.
ಕಸಾಪ ಮಹಿಳಾ ಪ್ರತಿನಿಧಿ ದಾಕ್ಷಾಯಿಣಿ, ಎಸ್.ಡಿ.ಎಂ.ಸಿ ಅಧ್ಯಕ್ಷ ರಾಮಚಂದ್ರ, ಶ್ರೀನಿವಾಸ, ಗ್ರಾಮ ಪಂಚಾಯಿತಿ ಸದಸ್ಯ ಗುರುಮೂರ್ತಿ, ಶಿಕ್ಷಕರಾದ ಶ್ರೀಕಾಂತ್, ಮಹೇಶ್, ಗ್ರಾಮಸ್ಥರು ಹಾಜರಿದ್ದರು.