Home News ಮುಂಜಾನೆಯ ಮುತ್ತಿನ ಮಣಿಗಳು

ಮುಂಜಾನೆಯ ಮುತ್ತಿನ ಮಣಿಗಳು

0

ತಾಲ್ಲೂಕಿನ ಎಲ್ಲೆಡೆ ಮುಂಜಾನೆ ಮಂಜು ಆವರಿಸತೊಡಗಿದೆ. ಮುಂಜಾನೆಯ ಮಂಜು ಮುತ್ತಿನ ಮಣಿಗಳಾಗುತ್ತಿವೆ. ಚಳಿಗಾಲದಲ್ಲಿ ಮುತ್ತಿನ ಹಾರ ಸೃಷ್ಟಿಯಾಗುವುದು ಪ್ರಕೃತಿಯ ವೈಶಿಷ್ಟ್ಯ. ಆದರೆ ಇದು ನೀರ ಹನಿಯ ಮುತ್ತು. ಜೇಡರ ಬಲೆ ಇಬ್ಬನಿಯಲ್ಲಿ ಮಿಂದು ಮುತ್ತಿನ ಹಾರವಾಗುತ್ತದೆ.

ಬೂದಾಳದ ಸಮೀಪ ಕಂಡುಬಂದ ಜೇಡರಬಲೆಗಳ ಮೇಲೆ ಮುತ್ತಿನಮಣಿಗಳು

ಮುಂಜಾನೆ ಚುಮು ಚುಮು ಚಳಿಯಲ್ಲಿ ಸೂರ್ಯ ಉದಯಿಸುವ ಸಮಯದಲ್ಲಿ ಊರ ಹೊರಗೆ ಹೋದರೆ ಇಂತಹ ಮುತ್ತುಗಳನ್ನು ನೋಡಬಹುದು. ಬಿಸಿಲಿನ ಕಾವು ಏರುತ್ತಿದ್ದಂತೆಯೇ ಮುತ್ತುಗಳು ಆವಿಯಾಗಿಬಿಡುತ್ತವೆ. ಅಷ್ಟರೊಳಗೆ ಕಣ್ತುಂಬಿಸಿಕೊಳ್ಳಬೇಕಷ್ಟೆ.
ಭೂಮಿಯ ಉಷ್ಣವನ್ನು ರಕ್ಷಿಸುವ ಮೋಡಗಳ ಮುಸುಕು ಇಲ್ಲವಾದಾಗ ಭೂಮಿಯಿಂದ ಹೊರಬಿದ್ದ ಶಾಖ ವಾತಾವರಣದಲ್ಲಿ ಸೇರಿ ಹೋಗುತ್ತದೆ. ಆಗ ಭೂಮಿ ಬೇಗ ತಂಪುಗೊಂಡು ತನಗೆ ಹತ್ತಿರದ ಗಾಳಿಯನ್ನೂ ತಂಪು ಮಾಡುತ್ತದೆ. ಆಗ ಮಂಜು ಆವರಿಸುತ್ತದೆ.
ಮುತ್ತು ಅಷ್ಟು ಸುಲಭದ ತುತ್ತಲ್ಲ. ಇದರ ಸೃಷ್ಟಿಯಾಗುವುದೇ ಬಲು ವಿಶಿಷ್ಟವಾಗಿ. ಒಣಹವೆಯ ರಾತ್ರಿಗಳಲ್ಲಿ ಮಣ್ಣು, ಬಂಡೆಗಳು ತಂಪುಗೊಳ್ಳಲಾರಂಭಿಸಿದಾಗ ನೆಲದ ಅತಿ ಸಮೀಪದ ಗಾಳಿಯೂ ತಂಪಾಗುತ್ತದೆ. ಅದರಲ್ಲಿನ ನೀರಾವಿ ತಣ್ಣನೆಯ ನೆಲ ಬಂಡೆಗಳ ಸಂಪರ್ಕ ಹೊಂದಿ ಸಾಂದ್ರೀಕರಿಸಿ ಸಸ್ಯಗಳ, ಜೇಡರಬಲೆಯ ಮೇಲೆ ಸೂಕ್ಷ್ಮ ಹನಿಗಳಂತೆ ಕೂರುತ್ತದೆ. ನೀರಾವಿ ಹೀಗೆ ಹನಿಗಳಾಗುವ ಉಷ್ಣತೆಗೆ ತುಷಾರಬಿಂದು(ಡಿವ್ ಪಾಯಿಂಟ್) ಎಂದು ಹೆಸರು.
ಬೂದಾಳದ ಸಮೀಪ ಕಂಡುಬಂದ ಜೇಡರಬಲೆಗಳ ಮೇಲೆ ಮುತ್ತಿನಮಣಿಗಳು

‘ಮುಂಜಾನೆಯ ಪ್ರಕೃತಿ ಆರಾಧಕರಿಗೆ, ವಾಯು ಸಂಚಾರಿಗರಿಗೆ ಮಂಜಿನ ಆಗಮನ ಆಹ್ಲಾದ ತಂದರೆ, ಮುಂಜಾನೆಯಲ್ಲಿ ಕಾಯಕದಲ್ಲಿ ನಿರತರಾದ ಹಾಲು, ಪೇಪರ್ ಹಂಚುವರು ಮತ್ತು ಮಳೆಗಾಗಿ ಕಾದ ರೈತರಿಗೆ ಬೇಸರ ಮೂಡಿಸುತ್ತದೆ. ನಿಸರ್ಗದ ವಿವಿಧ ಹವಾಮಾನವನ್ನು ಅನುಭವಿಸುತ್ತಾ ಸಣ್ಣ ಪುಟ್ಟ ರಮಣೀಯತೆಗಳನ್ನು ಆಸ್ವಾದಿಸುತ್ತಾ ಸಾಗಬೇಕು. ಗೊತ್ತೇ ಆಗದಂತೆ ಪೊದೆ, ಗಿಡಗಳಲ್ಲಿ ಕಟ್ಟಿದ ಜೇಡರಬಲೆಗಳು ಜೀವಬಂದಂತೆ ಮುತ್ತಿನ ಮಣಿಗಳನ್ನು ಹೊದ್ದು ನಿಲ್ಲುವ ಸೋಜಿಗವನ್ನು ಚಳಿಗಾಲದಲ್ಲಿ ಮಾತ್ರ ನೋಡಲು ಸಾಧ್ಯ’ ಎನ್ನುತ್ತಾರೆ ವಕೀಲ ಸತ್ಯನಾರಾಯಣಬಾಬು.

error: Content is protected !!