ತಾಲ್ಲೂಕಿನ ಯಣ್ಣಂಗೂರು ಗ್ರಾಮದ ಶ್ರೀ ಭುವನೇಶ್ವರಿ ಕನ್ನಡ ಯುವಕರ ಸಂಘದ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ೬೩ ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ರಾಜ್ಯದಲ್ಲಿ ಕನ್ನಡ ಭಾಷೆ ಇನ್ನೂ ಉಳಿದಿದೆಯೆಂದರೆ ಅದು ಕೇವಲ ಗ್ರಾಮೀಣ ಪ್ರದೇಶಗಳಿಂದ ಮಾತ್ರ ಎಂದು ಅವರು ತಿಳಿಸಿದರು.
ಇಂದು ಬದಲಾಗುತ್ತಿರುವ ಜನರ ಜೀವನಶೈಲಿಯಿಂದಾಗಿ ನಗರ ಪ್ರದೇಶಗಳಲ್ಲಿ ಕನ್ನಡ ಭಾಷೆಯನ್ನು ಹುಡುಕಾಡಬೇಕಾದಂತಹ ದುಸ್ಥಿತಿ ಒದಗಿ ಬಂದಿದೆ. ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡ ಮಂತ್ರ ಜಪಿಸುವ ನಾವುಗಳು ನಮ್ಮ ಮಕ್ಕಳನ್ನು ಕನ್ನಡ ಭಾಷೆಯಿಂದ ದೂರವಿಡುವುದಷ್ಟೇ ಅಲ್ಲದೇ ಇಂಗ್ಲೀಷ್ ವ್ಯಾಮೋಹ ಬೆಳೆಸುತ್ತಿದ್ದೇವೆ ಎಂದರು.
ಚಲನಚಿತ್ರ ನಿರ್ದೇಶಕ ಕೃಷ್ಣ ಮಾತನಾಡಿ, ನಾವು ವರ್ಷಕ್ಕೊಮ್ಮೆ ರಾಜ್ಯೋತ್ಸವದ ಹೆಸರಿನಲ್ಲಿ ಹಬ್ಬ ಆಚರಿಸಿದ ಮಾತ್ರಕ್ಕೆ ಭಾಷೆ ಉಳಿಯುವುದಿಲ್ಲ ಬದಲಿಗೆ ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಮಾತನಾಡುವುದು ಸೇರಿದಂತೆ ಮಾತೃಭಾಷೆಯಲ್ಲಿ ವ್ಯವಹರಿಸಿದಾಗ ಮಾತ್ರ ಭಾಷೆ ಉಳಿಯುತ್ತದೆ. ಮಾತೃ ಭಾಷೆಯ ಬಗ್ಗೆ ಅಭಿಮಾನ ಶೂನ್ಯರಾಗಿ, ಅನ್ಯ ಭಾಷೆಗಳನ್ನು ಪ್ರೀತಿಸುವ ಧೋರಣೆಯನ್ನು ಬದಿಗಿರಿಸಿ. ಕನ್ನಡ ಭಾಷೆಗೆ ಗೌರವ ನೀಡುವುದನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ರಂಗಭೂಮಿ ಕಲಾವಿದ ದೇವನಹಳ್ಳಿ ದೇವರಾಜ್, ಚಿತ್ರನಟಿ ಆರ್.ಬಿಂದು, ಜನಪದ ಗಾಯಕ ಮಹೇಶ್‌ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಕೆಂಪರೆಡ್ಡಿ, ಲಕ್ಮಣಮೂರ್ತಿ, ಈರಣ್ಣ, ಮುಖಂಡರಾದ ಚನ್ನೇಗೌಡ, ಗಣೆಶಪ್ಪ, ರಾಮಕೃಷ್ಣ ಹಾಜರಿದ್ದರು.