Home News ಯುವಜನತೆ ಕೃಷಿಗೆ ಬೆನ್ನು ತೋರಿಸುತ್ತಿದ್ದಾರೆ

ಯುವಜನತೆ ಕೃಷಿಗೆ ಬೆನ್ನು ತೋರಿಸುತ್ತಿದ್ದಾರೆ

0

ರೈತ ದೇಶದ ಬೆನ್ನೆಲುಬು ಎಂಬ ಮಾತು ಎಲ್ಲರೂ ಹೇಳುತ್ತರಾದರೂ ವಾಸ್ತವದಲ್ಲಿ ಯುವಜನತೆ ಕೃಷಿಗೆ ಬೆನ್ನು ತೋರಿಸುತ್ತಿದ್ದಾರೆ ಎಂದು ಮೌಂಟ್ ಕಾರ್ಮೆಲ್ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಸುಜಾತ ತಿಳಿಸಿದರು.
ತಾಲ್ಲೂಕಿನ ಹಿತ್ತಲಹಳ್ಳಿಯಲ್ಲಿ ಗುರುವಾರ ಸುಮಾರು 40 ಮಂದಿ ವಿದ್ಯಾರ್ಥಿಗಳೊಂದಿಗೆ ಕೃಷಿ ಆರ್ಥಿಕ ಅಧ್ಯಯನ ಪ್ರವಾಸ ಕೈಗೊಂಡಿದ್ದ ಅವರು ಪ್ರಗತಿಪರ ಕೃಷಿಕ ಎಚ್.ಜಿ.ಗೋಪಾಲಗೌಡ ಅವರ ಹಿಪ್ಪುನೇರಳೆ, ರೇಷ್ಮೆ, ಸಮಗ್ರ ಕೃಷಿ ಪದ್ಧತಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ಅವರು ಮಾತನಾಡಿದರು.
ನಮ್ಮ ದೇಶದ ಜನಸಂಖ್ಯೆ ಏರಿದಂತೆ ಕೃಷಿ ಉತ್ಪನ್ನಗಳ ಬೇಡಿಕೆ ಹೆಚ್ಚುತ್ತಿದೆ. ಆದರೂ ಕೃಷಿಯನ್ನು ಅವಲಂಬಿಸಿರುವವರು ಹಣ ಸಂಪಾದಿಸುವುದಿಲ್ಲ ಎಂಬ ನಂಬಿಕೆ ಮಾತ್ರ ಎಲ್ಲೆಡೆ ಪ್ರಚಲಿತವಾಗಿದೆ. ಸಾಲದ ಹೊರೆ ಹೊರಲಾಗದೆ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಓದಿ ವಿದ್ಯಾವಂತ ಯುವಜನತೆ ಕೃಷಿಯತ್ತ ಆಕರ್ಷಿತರಾಗುತ್ತಿಲ್ಲ. ಕೃಷಿಯನ್ನು ಹೇಗೆ ಮಾಡಿದರೆ ಲಾಭ ಸಂಪಾದಿಸಬಹುದು ಎಂದು ಕಂಡುಕೊಳ್ಳಲು ವಾಣಿಜ್ಯ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳೊಂದಿಗೆ ಅಧ್ಯಯನ ಪ್ರವಾಸ ಕೈಗೊಳ್ಳಲಾಗಿದೆ. ಕಡಿಮೆ ನೀರು, ವಿದ್ಯುತ್ ಅಭಾವ, ಕೂಲಿಯಾಳುಗಳ ಸಮಸ್ಯೆಯನ್ನು ಎದುರಿಸಿಯೂ ಲಾಭ ಸಂಪಾದಿಸುತ್ತಿರುವ ಮಾದರಿ ಕೃಷಿಕರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ಹೇಳಿದರು.
ಪ್ರಗತಿಪರ ಕೃಷಿಕ ಎಚ್.ಜಿ.ಗೋಪಾಲಗೌಡ ಸಮಗ್ರ ಕೃಷಿ ಪದ್ಧತಿ, ಸಾವಯವ ಬೇಸಾಯ, ಕಡಿಮೆ ನೀರಿನಿಂದ ಮಾಡಬಹುದಾದ ಕೃಷಿ, ರೇಷ್ಮೆ ಹುಳು ಸಾಕಣೆ ಮುಂತಾದವುಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ, ‘ಕೃಷಿ ಅಧ್ಯಯನ ಪ್ರವಾಸಗಳನ್ನು ಪ್ರತಿಯೊಂದು ಕಾಲೇಜುಗಳಲ್ಲೂ ನಡೆಸಬೇಕು. ತಮ್ಮ ಜಮೀನುಗಳನ್ನು ಬರಡು ಬಿಟ್ಟು ಅಥವಾ ಮಾರಾಟ ಮಾಡಿ ನಗರಗಳಿಗೆ ವಲಸೆ ಹೋಗುವ ಯುವ ವಿದ್ಯಾವಂತರಿಗೆ ಕೃಷಿಯಲ್ಲಿಯೂ ಹಣವಿದೆ, ಗೌರವವಿದೆ, ಹೆಮ್ಮೆಯಿದೆ ಎಂಬುದನ್ನು ತಿಳಿಸಿಕೊಡಬೇಕು’ ಎಂದು ಹೇಳಿದರು.