ನಗರದ ಅಶೋಕ ರಸ್ತೆಯಲ್ಲಿರುವ ಜಸ್ಮಿತ ಡ್ಯಾನ್ಸ್ ಅಕಾಡೆಮಿಯಲ್ಲಿ ಶಿಡ್ಲಘಟ್ಟ ನೃತ್ಯ ಕಲಾವಿದರಿಂದ ಬುಧವಾರ ಸಂಜೆ ಆಯೋಜಿಸಿದ್ದ ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಆರ್.ಅನಂತಕೃಷ್ಣ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿದರು.
ಕಠಿಣ ಪರಿಶ್ರಮ, ಬದ್ಧತೆ ಮತ್ತು ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಖಂಡಿತವಾಗಿ ಎನನ್ನಾದರೂ ಸಾಧಿಸಬಹುದು. ಸಾಧನೆಯೆಡೆಗೆ ಸಾಗುವಾಗ ಅನೇಕ ತೊಂದರೆಗಳು, ಟೀಕೆಗಳು ಬರುತ್ತವೆ. ಆದರೆ ನಮ್ಮಲ್ಲಿನ ಪ್ರಬಲ ಇಚ್ಚಾಶಕ್ತಿ, ಹಾಗೂ ಹಿಡಿದ ಕೆಲಸವನ್ನು ಗುರಿಮುಟ್ಟಿಸಬೇಕೆಂಬ ದೃಢನಿರ್ಧಾರ ಮಾತ್ರ ಸಾಧನೆಯೆಡೆಗೆ ಕರೆದೊಯ್ಯುತ್ತದೆ ಎಂದು ಅವರು ತಿಳಿಸಿದರು.
ಬಹಳಷ್ಟು ಕನ್ನಡಾಭಿಮಾನಿಗಳು ಮತ್ತು ದಾನಿಗಳು ಸಹಕರಿಸಿ ಕನ್ನಡದ ಕಾರ್ಯಕ್ರಮಗಳನ್ನು ನಡೆಸಲು ಪ್ರೋತ್ಸಾಹ ನೀಡುತ್ತಿದ್ದಾರೆ. ಅವರೆಲ್ಲರ ಸಹಕಾರ ಮತ್ತು ಆಶೀರ್ವಾದದಿಂದ ನಾನು ಕ್ರಿಯಾಶೀಲವಾಗಿ ನಾಡು, ನುಡಿ ಮತ್ತು ಸಾಹಿತ್ಯದ ಕೆಲಸವನ್ನು ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 11 ನೇ ವಾರ್ಡ್ ನ ನಗರಸಭಾ ಸದಸ್ಯ ಎಲ್. ಅನಿಲ್ ಕುಮಾರ್ ಮಾತನಾಡಿ, ನಾಡು, ನುಡಿ ಮತ್ತು ಸಮಾಜಸೇವೆಯಲ್ಲಿ ಮುಂಚೂಣಿಯಲ್ಲಿ ನಿಂತು ನಿಸ್ವಾರ್ಥವಾಗಿ ಕಾರ್ಯಕ್ರಮಗಳನ್ನು ನಡೆಸುವವರು ಅಪರೂಪ. ನಮ್ಮ ಊರಿಗೆ ಸಾಧಕರನ್ನು ಕರೆಸಿ ನಮ್ಮ ಮಕ್ಕಳಿಗೆ ಸ್ಫೂರ್ತಿ ಪ್ರೇರಣೆ ತುಂಬುವುದಲ್ಲದೆ ಕನ್ನಡ ಭಾಷೆ ಸಂಸ್ಕೃತಿಗೆ ಸಂಬಂಧಿಸಿದಂತೆ ಬಿ.ಆರ್.ಅನಂತಕೃಷ್ಣ ಅತ್ಯುತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಪ್ರಶಂಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ವಿ.ಕೃಷ್ಣ, ಲಕ್ಷ್ಮೀನಾರಾಯಣ್ ಹಾಗೂ ಸಾಹಿತಿ ಜಿ.ಎನ್.ಶ್ಯಾಮ ಸುಂದರ್ ಮಾತಾಡಿದರು.
ಈ ಸಂದರ್ಭದಲ್ಲಿ ವಿವಿಧ ಕಲಾವಿದರು ನೃತ್ಯ, ಹಾಡು ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಮತ್ತು ಸನ್ಮಾನ ಕಾರ್ಯಕ್ರಮ ನೆರವೇರಿಸಿದರು. ಚಲನಚಿತ್ರನಟ ಸಿ.ಎನ್.ಮುನಿರಾಜ್, ಲಿಟಲ್ ಸ್ಟಾರ್ ಡ್ಯಾನ್ಸ್ ಅಕಾಡೆಮಿಯ ಶ್ರೀನಿವಾಸ್ ಮತ್ತು ಮನೋಜ್ ತಂಡ, ಜಸ್ಮಿತಾ ಡ್ಯಾನ್ಸ್ ಅಕಾಡೆಮಿಯ ನೃತ್ಯ ನಿರ್ದೇಶಕಿ ಧನುಶ್ರೀ ತಂಡ, ಮಯೂರ ನಾಟ್ಯಕಲಾ ಕೇಂದ್ರ, ಶ್ರೀ ಸಾಯಿ ಆರ್ಟ್ಸ್ ತಂಡದ ಭರತನಾಟ್ಯ ನೃತ್ಯ ಕಲಾವಿದೆಯರಾದ ಶೋಭಿತ ಹಾಗೂ ಭುವನ, ಕಿರುತೆರೆ ನಟಿ ಸುಷ್ಮಾ, ಗಾಯಕರಾದ ನಾಗಭೂಷಣ್, ವಿಶ್ವಕರ್ಮ ಶ್ರೀನಿವಾಸ್, ಸಂತೋಷ್, ಡ್ಯಾನ್ಸ್ ವಿತ್ ಮಿ ಡ್ಯಾನ್ಸ್ ಅಕಾಡೆಮಿಯ ನೃತ್ಯ ನಿರ್ದೇಶಕ ನಾಗೇಶ್ ಹಾಗೂ ಹಲವಾರು ನೃತ್ಯ ಕಲಾವಿದರು, ಪೋಷಕರು ಹಾಜರಿದ್ದರು.