Home News ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಕಾರ್ಯಕ್ರಮ

ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಕಾರ್ಯಕ್ರಮ

0

ತಾಲ್ಲೂಕಿನ ಚೀಮಂಗಲದ ಕುವೆಂಪು ಶತಮಾನೋತ್ಸವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕಸಾಪ ತಾಲ್ಲೂಕು ಘಟಕ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ “ಕುವೆಂಪು ಬದುಕು ಬರಹ” ಕುರಿತಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಹಡಪದ್ ಮಾತನಾಡಿದರು.
ಪರಿಸರ, ಕೃಷಿ, ಮಹಿಳೆ, ಶೂದ್ರ ಮೊದಲಾದ ಹಲವು ಆಯಾಮಗಳನ್ನು ಒಳಗೊಂಡ ಕಾದಂಬರಿ, ನಾಟಕ, ಶಿಶು ಸಾಹಿತ್ಯ, ಕವನ ಸಂಕಲನ ಹೀಗೆ ಸಾಹಿತ್ಯದ ಎಲ್ಲ ನೆಲೆಗಳನ್ನು ಕುವೆಂಪು ಅವರ ಕೃತಿಗಳಲ್ಲಿ ಕಾಣಬಹುದಾಗಿದೆ. ಕುವೆಂಪು ಅವರು ತಮ್ಮ ಪ್ರಯತ್ನ ಹಾಗೂ ಸಾಧನೆಯಿಂದ ವಿಶ್ವಮಾನವರಾದ ಮಹಾನ್ ಚೇತನ ಎಂದು ಅವರು ತಿಳಿಸಿದರು.
ಕುವೆಂಪುರವರು ಕನ್ನಡ ಸಾಹಿತ್ಯವನ್ನು ಮೇರು ಶಿಖರಕ್ಕೇರಿಸಿದ ಮಹಾನ್‌ ಚೇತನ ಹಾಗೂ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ರಾಷ್ಟ್ರಕವಿ. ಮಲೆನಾಡಿನಲ್ಲಿ ಹುಟ್ಟಿಬೆಳೆದ ಅವರು ತಮ್ಮ ಕಾವ್ಯಗಳಲ್ಲಿ, ಕವಿತೆಗಳಲ್ಲಿ ಮಲೆನಾಡಿನ ಸೊಬಗನ್ನು ಎಳೆಎಳೆಯಾಗಿ ಬಣ್ಣಿಸಿದ್ದಾರೆ. ಕನ್ನಡ ಸಾರಸ್ವತ ಲೋಕಕ್ಕೆ ಕುವೆಂಪು ಅವರು ಯತೇಚ್ಛ ಸಾಹಿತ್ಯ ಭಂಡಾರವನ್ನೇ ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು.
ಗ್ರೇಡ್ 2 ತಹಶಿಲ್ದಾರ್ ಹನುಮಂತರಾವ್ ಮಾತನಾಡಿ, ಇಲ್ಲಿ ಯಾರೂ ಮೇಲಲ್ಲ, ಕೀಳಲ್ಲ. ಎಲ್ಲರೂ ಸಮಾನರೆಂಬ ಭಾವನೆಯನ್ನು ಕುವೆಂಪುರವರ ಕೃತಿಗಳಲ್ಲಿ ಕಾಣಬಹುದಾಗಿದೆ. ಕುವೆಂಪು ಅವರು ನೀಡಿದ ಸರ್ವೋದಯ, ಸಮನ್ವಯ, ವಿಶ್ವಮಾನವನ ಸಂದೇಶ ಸಾರ್ವಕಾಲಿಕವಾದುದು ಎಂದರು.
“ಕುವೆಂಪು ಬದುಕು ಬರಹ” ಕುರಿತಂತೆ ಶಾಲೆಯಲ್ಲಿ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಚರಣ್, ಅಮೂಲ್ಯ, ಅಂಕುಶ್ ಯಾದವ್ ಅವರಿಗೆ ಕಸಾಪ ವತಿಯಿಂದ ಪುಸ್ತಕ ಮತ್ತು ಪ್ರಮಾಣಪತ್ರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಹಡಪದ್ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ.ಮುನಿರಾಜು ಅವರನ್ನು ಗೌರವಿಸಲಾಯಿತು.
ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಿ.ಎಂ.ನಾರಾಯಣಸ್ವಾಮಿ, ಶಿಕ್ಷಕರಾದ ವೆಂಕಟೇಶಪ್ಪ, ನಾಗೇಶ್, ನಾಗರಾಜು, ಶ್ರೀಧರ್, ಮಮತಾ, ಜ್ಯೋತಿ, ರಾಜೀವಗೌಡ, ಲಕ್ಷ್ಮೀಕಾಂತಮ್ಮ, ಅರುಣಕುಮಾರಿ, ಸಿದ್ದಲಿಂಗಪ್ಪ, ಕಸಾಪ ಮಹಿಳಾ ಪ್ರತಿನಿಧಿ ದಾಕ್ಷಾಯಿಣಿ, ಸಂಘಸಂಸ್ಥೆಗಳ ಪ್ರತಿನಿಧಿ ಶಂಕರ್, ನಗರ ಘಟಕದ ಅಧ್ಯಕ್ಷ ಸಿ.ಎನ್.ಮುನಿರಾಜು, ಚಂದ್ರಕಲಾ, ಮಂಜುನಾಥ್ ಹಾಜರಿದ್ದರು.

error: Content is protected !!