Home News ರೇಷ್ಮೆ ಉದ್ದಿಮೆಯ ಅಧ್ಯಯನಕ್ಕಾಗಿ ಥಾಯ್ಲೆಂಡ್ ಅಧಿಕಾರಿಗಳ ಭೇಟಿ

ರೇಷ್ಮೆ ಉದ್ದಿಮೆಯ ಅಧ್ಯಯನಕ್ಕಾಗಿ ಥಾಯ್ಲೆಂಡ್ ಅಧಿಕಾರಿಗಳ ಭೇಟಿ

0

ಶಿಡ್ಲಘಟ್ಟದ ರೇಷ್ಮೆ ಉದ್ದಿಮೆಯನ್ನು ಅಧ್ಯಯನ ಮಾಡಿ ತಮ್ಮ ದೇಶದಲ್ಲಿ ಅಳವಡಿಸಿಕೊಳ್ಳಲೆಂದು ಗುರುವಾರ ಥಾಯ್ಲೆಂಡ್ ದೇಶದ ರೇಷ್ಮೆ ಇಲಾಖೆಯ ವಿವಿಧ ಅಧಿಕಾರಿಗಳ ತಂಡ ಭೇಟಿ ನೀಡಿದ್ದರು.
ಥಾಯ್ಲೆಂಡ್ ದೇಶದ ‘ದ ಕ್ವೀನ್ ಸಿರಿಕಿಟ್’ ರೇಷ್ಮೆ ಇಲಾಖೆ, ಕೃಷಿ ಇಲಾಖೆಯ ಅಧಿಕಾರಿಗಳು, ಸಂಶೋಧಕರು ಹಾಗೂ ಆರ್ಥಿಕ ತಜ್ಞರ ಒಂಬತ್ತು ಮಂದಿಯ ತಂಡ, ಪಟ್ಟಣದ ರೇಷ್ಮೆ ಗೂಡಿನ ಮಾರುಕಟ್ಟೆ, ರೇಷ್ಮೆ ನೂಲು ಬಿಚ್ಚಾಣಿಕಾ ಕೇಂದ್ರಗಳು, ಟ್ವಿಸ್ಟಿಂಗ್ ಘಟಕಗಳು, ರೇಷ್ಮೆ ಜೋಟ್ ಸಂಸ್ಕರಿಸಿ ನೂಲು ಬಿಚ್ಚಾಣಿಕಾ ಘಟಕವನ್ನು ವೀಕ್ಷಿಸಿ ಮಾಹಿತಿಯನ್ನು ಪಡೆದರು.
ಥಾಯ್ಲೆಂಡ್ ಅಧಿಕಾರಿಗಳ ತಂಡದ ಒಂದು ವಾರದ ಭಾರತ ಭೇಟಿಯಲ್ಲಿ ರಾಮನಗರ ಮತ್ತು ಶಿಡ್ಲಘಟ್ಟದಲ್ಲಿ ರೇಷ್ಮೆ ಉದ್ದಿಮೆ, ಕಾಮಗಾರಿ ವೀಕ್ಷಣೆ, ಆರ್ಥಿಕತೆಯ ಅಧ್ಯಯನದೊಂದಿಗೆ ಮೈಸೂರು ಹಾಗೂ ಬೆಂಗಳೂರು ರೇಷ್ಮೆ ಸಂಶೋಧನಾ ಕೇಂದ್ರಗಳಿಗೂ ಭೇಟಿ ನೀಡಲಿದ್ದಾರೆ.
ಪಟ್ಟಣದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಗುರುವಾರ ಬೆಳಿಗ್ಗೆ ಭೇಟಿ ನೀಡಿ ರೇಷ್ಮೆ ಗೂಡಿನ ವಹಿವಾಟು, ಹರಾಜು ಪ್ರಕ್ರಿಯೆ, ರೇಷ್ಮೆ ಗೂಡಿನ ಗುಣಮಟ್ಟವನ್ನು ವೀಕ್ಷಿಸಿ, ಕಚ್ಛಾ ರೇಷ್ಮೆ ಉತ್ಪಾದನಾ ಘಟಕಗಳಾದ ಚರಕಾ, ಫಿಲೇಚರ್ ಹಾಗೂ ಮಲ್ಟಿ ಎಂಡ್ ಕೇಂದ್ರಗಳಿಗೆ ಸ್ಥಳೀಯ ಅಧಿಕಾರಿಗಳೊಂದಿಗೆ ತೆರಳಿ ಮಾಹಿತಿಯನ್ನು ಪಡೆದರು. ತಾಲ್ಲೂಕಿನ ಹನುಮಂತಪುರದ ಬಳಿಯಿರುವ ಎಸ್.ಪಿ.ಎಸ್ ಮುನಾವರ್ ಅವರ ರೇಷ್ಮೆ ಜೋಟ್ ಸಂಸ್ಕರಿಸಿ ನೂಲು ಬಿಚ್ಚಾಣಿಕಾ ಘಟಕಕ್ಕೂ ಭೇಟಿ ನೀಡಿ, ತ್ಯಾಜ್ಯರೇಷ್ಮೆಯನ್ನು ಸಂಸ್ಕರಿಸಿ ಹತ್ತಿಯಂತೆ ಮಾಡಿ ಅದರಿಂದ ನೂಲು ತಯಾರಿಸುವ ರೀತಿಯನ್ನು ಹಾಗೂ ಅಲ್ಲಿ ಕೆಲಸ ಮಾಡುವ ಕಾರ್ಮಿಕರ ಕೌಶಲ್ಯದ ಬಗ್ಗೆಯೂ ತಿಳಿದುಕೊಂಡರು.
‘ಥಾಯ್ಲೆಂಡ್ನಲ್ಲಿ ರೇಷ್ಮೆ ಉದ್ದಿಮೆ ಸಣ್ಣ ಪ್ರಮಾಣದಲ್ಲಿದೆ. ನಮ್ಮ ದೇಶ ಕೂಡ ಭಾರತದಂತೆಯೇ ಉಷ್ಣವಲಯದ ದೇಶವಿದ್ದು, ರೇಷ್ಮೆ ಉದ್ದಿಮೆ ಬೆಳೆಸಲು ಸಾಕಷ್ಟು ಅವಕಾಶಗಳಿವೆ. ಯಾಂತ್ರಿಕತೆಯನ್ನೇ ಹೆಚ್ಚಾಗಿ ಅವಲಂಬಿಸಿರುವ ನಾವು ಇಲ್ಲಿನ ಶ್ರಮಿಕರ ಕೌಶಲ್ಯವನ್ನು ಕಂಡು ಬೆರಗಾದೆವು. ಉತ್ತಮ ಗುಣಮಟ್ಟದ ರೇಷ್ಮೆ ಉತ್ಪಾದನೆಯ ಬಗ್ಗೆ ಸಾಕಷ್ಟು ಮಾಹಿತಿಯನ್ನು ಪಡೆದಿದ್ದೇವೆ. ನಮ್ಮೊಂದಿಗೆ ನಮ್ಮ ದೇಶದ ಆರ್ಥಿಕ ತಜ್ಞರೂ ಬಂದಿದ್ದು, ಅಂಕಿ ಅಂಶಗಳನ್ನು ಸಂಗ್ರಹಿಸಿದ್ದಾರೆ. ಎರಡೂ ದೇಶಗಳ ಬಾಂಧವ್ಯ ಉತ್ತಮವಾಗಿರುವುದರಿಂದ ತಂತ್ರಜ್ಞಾನ, ಕೌಶಲ್ಯ, ಗುಣಮಟ್ಟದ ಬಗ್ಗೆ ತಿಳಿದುಕೊಂಡು ನಮ್ಮಲ್ಲೂ ರೇಷ್ಮೆ ಉದ್ದಿಮೆಯನ್ನು ಅಭಿವೃದ್ಧಿಪಡಿಸಲು ಭಾರತಕ್ಕೆ ಬಂದಿದ್ದೇವೆ’ ಎಂದು ‘ದ ಕ್ವೀನ್ ಸಿರಿಕಿಟ್’ ರೇಷ್ಮೆ ಇಲಾಖೆಯ ನಿರ್ದೇಶಕಿ ಸಿರಿಪೋರ್ನ್ ಬೂನ್ಚೋ ತಿಳಿಸಿದರು.
ಈ ಸಂದರ್ಭದಲ್ಲಿ ರೇಷ್ಮೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಎಚ್.ಎನ್.ಮಹೇಶ್, ಪ್ರಕಾಶ್ ಭಟ್, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಶಂಕರಪ್ಪ, ಥಾಯ್ಲೆಂಡ್ ನಿಯೋಗದ ಮೊನ್ಚಾಯ್ ಮೀಸುಕ್, ಸಮ್ರನ್ ಸುಕ್ಜಯ್, ದಿರಕೆ ಸುಂಗ್ಸೋರ್ನ್, ರುಂಗ್ಸಕ್ ಬೂನೋಂನ್ಟೆ, ತಿಪ್ಪತ್ತೊಸ್ನ್ ಮಸ್ಗರೂನ್, ಪಕ್ವಿಪಾ ಪೆಚ್ವಿಚಿಟ್, ಕನ್ನಿಕಾ ಸೊಂತಿ, ಕನೋಕ್ವಾನ್ ಕುನ್ನಥಮ್ ಹಾಜರಿದ್ದರು.