Home News ರೇಷ್ಮೆ ಗೂಡಿನ ಪ್ರಮಾಣ ಇಳಿಕೆ – ಬಣಗುಡುತ್ತಿದೆ ಮಾರುಕಟ್ಟೆ

ರೇಷ್ಮೆ ಗೂಡಿನ ಪ್ರಮಾಣ ಇಳಿಕೆ – ಬಣಗುಡುತ್ತಿದೆ ಮಾರುಕಟ್ಟೆ

0

ರಾಷ್ಟ್ರದ ಅತಿ ದೊಡ್ಡ ರೇಷ್ಮೆ ಗೂಡಿನ ಮಾರುಕಟ್ಟೆ ಎಂಬ ಖ್ಯಾತಿಯನ್ನು ಗಳಿಸಿಕೊಂಡಿರುವ ಶಿಡ್ಲಘಟ್ಟ ರೇಷ್ಮೆಗೂಡಿನ ಮಾರುಕಟ್ಟೆಗೆ ಬರುತ್ತಿರುವ ಗೂಡಿನ ಪ್ರಮಾಣದಲ್ಲಿ ತೀವ್ರವಾಗಿ ಇಳಿಮುಖವಾಗಿದ್ದು, ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಬರುವಂತಹ ಗೂಡಿನ ಪ್ರಮಾಣ ಇನ್ನಷ್ಟು ಕಡಿಮೆಯಾಗುವಂತಹ ಆತಂಕ ಎದುರಾಗಿದೆ.
ನಗರದಲ್ಲಿ ರೇಷ್ಮೆಗೂಡಿನ ಮಾರುಕಟ್ಟೆಗೆ ನೆರೆಯ ರಾಜ್ಯಗಳು ಸೇರಿದಂತೆ ರಾಜ್ಯದ ವಿವಿದೆಡೆಗಳಿಂದ ಸುಮಾರು ೧,೦೦೦ ಕ್ಕಿಂತಲೂ ಹೆಚ್ಚಿನ ಲಾಟುಗಳು (ಸುಮಾರು 45 ಟನ್) ಪ್ರಮಾಣದಲ್ಲಿ ರೇಷ್ಮೆಗೂಡು ಬರುತ್ತಿತ್ತು, ಆದರೆ, ತೀವ್ರವಾದ ನೀರಿನ ಅಭಾವ ಹಾಗೂ ಉಷ್ಣಾಂಶ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರೇಷ್ಮೆಗೂಡಿನ ಉತ್ಪಾದನೆಯಾಗುತ್ತಿಲ್ಲ. ಇದರ ಪರಿಣಾಮವಾಗಿ ಮಾರುಕಟ್ಟೆಗೆ ಬರುತ್ತಿರುವ ಗೂಡಿನ ಪ್ರಮಾಣ ಅರ್ಧದಷ್ಟು ಕುಸಿತ ಕಂಡಿದೆ. ಕೋಟ್ಯಾಂತರ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗಿರುವ ಗೋಡನ್ಗಳಲ್ಲಿನ ಜಾಲರಿಗಳು, ಬಣಗುಡುತ್ತಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮೆಯಾಗುವ ಆತಂಕ ಎದುರಾಗಿದ್ದು, ಪ್ರತಿ ಕೆ.ಜಿ. ರೇಷ್ಮೆಗೂಡಿನ ಬೆಲೆ ಸುಮಾರು ೪೪೦ ರೂಪಾಯಿಗಳವರೆಗೂ ಏರಿಕೆಯಾಗುತ್ತಿದೆ. ಒಂದು ಕಡೆ ಉತ್ತಮ ಬೆಲೆಗಳು ಸಿಗುವಾಗ ಬೇಸಿಗೆಯಲ್ಲಿ ಬೆಳೆಗಳಾಗದೇ ರೈತರು ಸಂಕಷ್ಟಕ್ಕೆ ಸಿಲುಕಿರುವುದರ ಜೊತೆಗೆ ರೀಲರುಗಳೂ ಕೂಡಾ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ತಾಲ್ಲೂಕಿನಲ್ಲಿ ಹಲವೆಡೆ ರೈತರು ನೀರಿನ ಕೊರತೆಯಿಂದಾಗಿ ಹಿಪ್ಪುನೇರಳೆ ತೋಟಗಳನ್ನು ಕಿತ್ತುಹಾಕುತ್ತಿದ್ದು, ಸರ್ಕಾರ ರೇಷ್ಮೆಬೆಳೆಗಾರರ ನೆರವಿಗೆ ಧಾವಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

error: Content is protected !!
Exit mobile version