Home News ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಮರಗಳ ಮಾರಣಹೋಮ

ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಮರಗಳ ಮಾರಣಹೋಮ

0

ನಗರದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಸುಮಾರು ೧೫ ವರ್ಷಗಳ ಹಳೆಯದಾದ ಮರಗಳನ್ನು ದುಷ್ಕರ್ಮಿಗಳು ಬುಧವಾರ ರಾತ್ರಿ ಕಡಿದಿದ್ದಾರೆ.
ನಗರದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ರಾತ್ರಿ ಹಗಲು ಪಾಳಿಯಲ್ಲಿ ಕಾವಲುಗಾರರನ್ನು ನೇಮಿಸಿದ್ದು ಮಾರುಕಟ್ಟೆಯಲ್ಲಿ ಜನಸಂದಣಿ ಇದ್ದರೂ ಸಹ ದುಷ್ಕರ್ಮಿಗಳು ಮರಗಳನ್ನು ರಾತ್ರಿ ಚಾಣಾಕ್ಷತೆಯಿಂದ ಕಡಿದಿದ್ದಾರೆ. ಕಡಿದ ಮರಗಳ ತುಂಡುಗಳನ್ನು ಸಾಗಾಣಿಕೆ ಮಾಡಲು ಬಂದ ವಾಹನವನ್ನು ಇಲ್ಲಿನ ಕಾವಲುಗಾರರು ಹಿಡಿದು ನಿಲ್ಲಿಸಿದ್ದಾರೆ. ಮರದ ಕಟ್ಟಿಗೆಗಳನ್ನು ಅಲ್ಲೆ ಬಿಟ್ಟು ವಾಹನದ ಸಮೇತ ಪರಾರಿಯಾಗಿದ್ದಾರೆ.
ಎರಡು ಗೋದಾಮುಗಳ ನಡುವೆ ಇರುವ ಕಿರಿದಾದ ಸ್ಥಳದಲ್ಲಿ ಸುಮಾರು ೧೫ ವರ್ಷ ಹಳೆಯದಾದ ಬೃಹತ್ ಗಾತ್ರದ ಮರಗಳನ್ನು ಕಡಿದು ನೆಲಕ್ಕುರುಳಿದ ಮರಗಳನ್ನು ಕಂಡು ಕೆಲವು ರೀಲರುಗಳು ಮಾರುಕಟ್ಟೆ ಉಪನಿರ್ದೇಶಕರಿಗೆ ದೂರು ನೀಡಿದ್ದಾರೆ. ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ದೂರಿನ ಮೇರೆಗೆ ಆಗಮಿಸಿದ ಅರಣ್ಯ ಇಲಾಖೆಯ ಪ್ರಾದೇಶಿಕ ಕಚೇರಿ ಉಪವಿಭಾಗಾಧಿಕಾರಿ ಮದನ್ ಮೋಹನ್ ರವರು ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ. ಬಹಳ ಬೆಲೆ ಬಾಳುವ ಎರಡು ಮರಗಳನ್ನು ಕಡಿದಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿ ಮರಗಳನ್ನು ಕಡಿದವರ ಮೇಲೆ ಕಾನೂನಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಮಾರುಕಟ್ಟೆಯಲ್ಲಿನ ಮರಗಳನ್ನು ಕಡಿಯುವುದು ಸುಲಭವೇನಲ್ಲ, ಈ ಬಗ್ಗೆ ಯಾರ ಕೈವಾಡವಿದೆ ಎಂದು ಪತ್ತೆ ಹಚ್ಚಬೇಕು. ಸರಿಯಾಗಿ ತನಿಖೆ ನಡೆಸಿ ಅಪರಾಧಿಗಳನ್ನು ಪತ್ತೆಹಚ್ಚಿ ಸೂಕ್ತವಾದ ಶಿಕ್ಷೆ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

error: Content is protected !!