Home News ರೇಷ್ಮೆ ನಂಬಿದವರು ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಬೇಕು

ರೇಷ್ಮೆ ನಂಬಿದವರು ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಬೇಕು

0

ರೇಷ್ಮೆ ಉತ್ಪಾದನೆಯಲ್ಲಿ ಹೊಸ ಹೊಸ ತಾಂತ್ರಿಕತೆಗಳನ್ನು ಬಳಕೆ ಮಾಡಿಕೊಂಡರೆ ಉದ್ಯಮದಲ್ಲಿ ಆರ್ಥಿಕ ಸ್ವಾವಲಂಬನೆ ಕಾಣಬಹುದಾಗಿದೆ ಎಂದು ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಎಚ್.ಆರ್.ಪ್ರಭಾಕರ್ ಹೇಳಿದರು.
ನಗರದ ರೇಷ್ಮೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಬುಧವಾರ ಮೈರಾಡ ಸಂಸ್ಥೆ ಮತ್ತು ರೇಷ್ಮೆ ಇಲಾಖೆಯ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ ರೇಷ್ಮೆ ರೈತ ಉತ್ಪಾದಕ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರ ಆಯ್ಕೆ ಕಾರ್ಯಕ್ರಮ ಮತ್ತು ಒಣಬೇಸಾಯದಲ್ಲಿ ಹಿಪ್ಪುನೇರಳೆ ಮರಗಳ ಅಭಿವೃದ್ಧಿ ಹಾಗೂ ಬೇಸಿಗೆ ಕಾಲದಲ್ಲಿ ರೇಷ್ಮೆಬೆಳೆ ನಿರ್ವಹಣೆಯ ತಾಂತ್ರಿಕತೆಯ ಕುರಿತು ತರಬೇತಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ತೀವ್ರ ನೀರಿನ ಕೊರತೆಯನ್ನು ಅನುಭವಿಸುತ್ತಿರುವ ಬಯಲುಸೀಮೆ ಭಾಗದಲ್ಲಿನ ರೈತರು ರೇಷ್ಮೆಯನ್ನು ನಂಬಿಕೊಂಡು ಜೀವನ ಮಾಡುತ್ತಿದ್ದು ಇತ್ತಿಚೆಗೆ ನೀರಿನ ಅಭಾವದಿಂದಾಗಿ ಬಹಳಷ್ಟು ರೈತರು ರೇಷ್ಮೆ ಉದ್ಯಮದಿಂದ ವಿಮುಖರಾಗುತ್ತಿದ್ದಾರೆ. ಇದರಿಂದ ಜೀವನೋಪಾಯವು ಕಷ್ಟಕರವಾಗುತ್ತಿದೆ. ಆದ್ದರಿಂದ ರೈತರು ಹಿಪ್ಪುನೇರಳೆಗೆ ಹನಿ ನೀರಾವರಿಯನ್ನೆ ಅವಲಂಬಿಸದೆ ಮರಕಡ್ಡಿ ಪದ್ಧತಿಯಲ್ಲಿಯೂ ಹಿಪ್ಪುನೇರಳೆ ಬೆಳೆಸುವುದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭವನ್ನು ಪಡೆದುಕೊಳ್ಳಬಹುದಾಗಿದೆ ಎಂದರು.
ಮೈರಾಡ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ್ ರಿಷ್‌ಬುದ್ ಮಾತನಾಡಿ, ಮರಕಡ್ಡಿ ಪದ್ಧತಿಯನ್ನು ಅನುಸರಿಸುವುದರಿಂದ ರೈತರಿಗೆ ಹೆಚ್ಚಿನ ಹೊರೆಯಾಗುವುದಿಲ್ಲ. ಹಿಪ್ಪುನೇರಳೆಯ ಜೊತೆಯಲ್ಲೆ ಮಿಶ್ರಬೆಳೆಗಳನ್ನು ಬೆಳೆಯಬಹುದಾಗಿರುವುದರಿಂದ ಉತ್ತಮ ಇಳುವರಿ ಪಡೆಯಬಹುದಾಗಿದ್ದು ರೈತರಿಗೆ ಹೆಚ್ಚಿನ ಹೊರೆಯಾಗುವುದಿಲ್ಲ. ಹೊಸ ಹೊಸ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರಿಂದ ಕಾರ್ಮಿಕರ ಕೊರತೆಯನ್ನು ನೀಗಿಸಿಕೊಳ್ಳುವುದರ ಜೊತೆಗೆ ರೇಷ್ಮೆ ಉದ್ಯಮವನ್ನು ಉಳಿಸಿಕೊಳ್ಳಲು ಅನುಕೂಲವಾಗಲಿದೆ ಎಂದರು.
ತಾಲ್ಲೂಕಿನ ವಿವಿಧ ಗ್ರಾಮಗಳಿಂದ ನೂರಾರು ಮಂದಿ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಲಘಟ್ಟಪುರದ ಕೆ.ಎಸ್.ಎಸ್.ಆರ್.ಡಿ.ಐನ ವಿಜ್ಞಾನಿ ಡಾ.ಚಲುವಾಚಾರಿ ಅವರು ಒಣಬೇಸಾಯದಲ್ಲಿ ಹಿಪ್ಪುನೇರಳೆ ಮರಗಳ ಅಭಿವೃದ್ಧಿಯ ಬಗ್ಗೆ ರೈತರಿಗೆ ತರಬೇತಿ ನೀಡಿದರು. ಬೇಸಿಗೆ ಕಾಲದಲ್ಲಿ ರೇಷ್ಮೆ ನಿರ್ವಹಣೆಯ ಬಗ್ಗೆ ಡಾ.ಮರಿಬಾಶೆಟ್ಟಿ ತರಬೇತಿ ನೀಡಿದರು.
ರೈತ ಗುಂಪುಗಳಿಂದ ಆಯ್ಕೆಮಾಡಲಾದ ಪದಾಧಿಕಾರಿಗಳಿಂದ ರೇಷ್ಮೆ ರೈತ ಉತ್ಪಾದಕ ಸಂಸ್ಥೆಯ ಆಡಳಿತ ಮಂಡಳಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾ ಪಂಚಾಯಿತಿ ರೇಷ್ಮೆ ಉಪನಿರ್ದೇಶಕ ಬಿ.ಆರ್.ನಾಗಭೂಷಣ್, ರೇಷ್ಮೆ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ವಿಸ್ತರಣಾಧಿಕಾರಿ ಎಂ.ನಾರಾಯಣಸ್ವಾಮಿ, ಪ್ರವೀಣ್, ಮೈರಾಡ ಸಂಸ್ಥೆಯ ಗಾಯಿತ್ರಿ ಲಾಲ್, ನಿರ್ದೇಶಕ ವೆಂಕಟರೆಡ್ಡಿ ಗಿರಣಿ ಮುಂತಾದವರು ಹಾಜರಿದ್ದರು.