ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಗುರುವಾರ ಶಿಡ್ಲಘಟ್ಟ ತಾಲ್ಲೂಕು ರೇಷ್ಮೆ ನೂಲು ಬಿಚ್ಚಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ಸಮಾವೇಶ ಹಾಗೂ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿದರು.
ವಿದೇಶದಿಂದ ಆಮದಾಗುವ ರೇಷ್ಮೆಗೆ ಕಡಿವಾಣ ಹಾಕಿದಾಗ ಮಾತ್ರ ನಮ್ಮ ರೇಷ್ಮೆಗೆ ಬೆಲೆ ಬರುತ್ತದೆ. ರೇಷ್ಮೆಯನ್ನು ನಂಬಿದವರ ಜೀವನ ಸುಧಾರಣೆಯಾಗಲು ಆಮದು ರೇಷ್ಮೆಗೆ ಸುಂಕ ಹಾಕಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಯುಪಿಎ ಸರ್ಕಾರದ ಅವಧಿಯಲ್ಲಿ ರೇಷ್ಮೆ ಮೇಲಿನ ಆಮದು ಸುಂಕವನ್ನು ಶೇ ೧೦ ರಿಂದ ೧೫ ಕ್ಕೆ ಏರಿಸಿ ರೇಷ್ಮೆ ಉದ್ಯಮಕ್ಕೆ ಚೇತರಿಕೆಯನ್ನು ನೀಡಲಾಗಿತ್ತು. ಆದರೆ ಪ್ರಧಾನಿ ಮೋದಿಯವರು ಬೆನಾರಸಿನ ಮಗ್ಗದವರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಆಮದು ಸುಂಕವನ್ನು ಶೇ ೧೦ಕ್ಕೆ ಇಳಿಸಿದ್ದರಿಂದ ಅಸ್ಸಾಂ, ಪಶ್ಚಿಮ ಬಂಗಾಲ, ತಮಿಳುನಾಡು, ಆಂಧ್ರಪ್ರದೇಶ ಮತ್ತು ರಾಜ್ಯದ ಲಕ್ಷಾಂತರ ರೇಷ್ಮೆಯ ಅವಲಂಬಿತರು ಸಂಕಷ್ಟಕ್ಕೆ ಗುರಿಯಾದರು ಎಂದರು.
ರೇಷ್ಮೆ ನೂಲು ಬಿಚ್ಚಾಣಿಕೆದಾರರು ತಾವು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ತಿಳಿಸಿದ್ದಾರೆ. ಅವುಗಳನ್ನು ಸರಿಪಡಿಸಲು ಮುಖ್ಯಮಂತ್ರಿಗಳೊಂದಿಗೂ ಚರ್ಚಿಸುತ್ತೇನೆ. ಪ್ರೋತ್ಸಾಹಧನ ಕೊಡಿಸಲು ಪ್ರಯತ್ನಿಸುತ್ತೇನೆ. ರೇಷ್ಮೆಗೆ ಉತ್ತಮ ಬೆಲೆ ಸಿಕ್ಕರೆ ರೇಷ್ಮೆ ಬಿಚ್ಚಾಣಿಕೆದಾರರು ಅಭಿವೃದ್ಧಿ ಹೊಂದುವರು. ಇದರಿಂದ ರೈತರು ತರುವ ರೇಷ್ಮೆ ಗೂಡಿಗೂ ಒಳ್ಳೆಯ ಬೆಲೆ ಬರುತ್ತದೆ. ಅಧಿವೇಶನ ಮುಗಿದ ನಂತರ ರೀಲರುಗಳ ನಿಯೋಗವನ್ನು ಸಚಿವರ ಬಳಿ ಕರೆದೊಯ್ಯುತ್ತೇನೆ. ಸಮಸ್ಯೆಗಳನ್ನು ಬಗೆಹರಿಸಲು ಎಲ್ಲರೂ ಕೂಡಿ ಪ್ರಯತ್ನಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ರೇಷ್ಮೆ ನೂಲು ಬಿಚ್ಚಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ತಮ್ಮ ವಿವಿಧ ಬೇಡಿಕೆಗಳ ಪಟ್ಟಿ ಇರುವ ಮನವಿಯನ್ನು ಸಲ್ಲಿಸಿದರು ರೇಷ್ಮೆ ನೂಲನ್ನು ಕೆ.ಎಸ್.ಎಂ.ಬಿ ಮೂಲಕ ಒತ್ತೆ ಸಾಲ ಇಟ್ಟುಕೊಳ್ಳಲು ಅಗತ್ಯ ಬಂಡವಾಳವನ್ನು ಕೆ.ಎಸ್.ಎಂ.ಬಿ ಗೆ ಕೊಡಿ. ರೀಲರುಗಳ ಹಿತದೃಷ್ಟಿಯಿಂದ ಪ್ರೋತ್ಸಾಹಧನವನ್ನು ನೀಡಿ. ಇ ಹರಾಜನ್ನು ಉನ್ನತೀಕರಿಸಿ ಮುಂತಾದ ಬೇಡಿಕೆಗಳನ್ನು ಈಡೇರಿಸಿ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ನೆರವಾಗುವಂತೆ ಮನವಿಯನ್ನು ಸಲ್ಲಿಸಿದರು.
ತಾಲ್ಲೂಕು ರೇಷ್ಮೆ ನೂಲು ಬಿಚ್ಚಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅನ್ಸರ್ ಖಾನ್, ರಾಜ್ಯ ಘಟಕದ ಅಧ್ಯಕ್ಷ ವಹೀದ್ ಪಾಷ, ಗೌರವಾಧ್ಯಕ್ಷ ಗುರುಸ್ವಾಮಿ, ನಗರಸಭೆ ಅಧ್ಯಕ್ಷ ಅಫ್ಸರ್ ಪಾಷ, ಜಂಟಿ ನಿರ್ದೇಶಕ ಶಶಿಕುಮಾರ್, ರೇಷ್ಮೆ ಇಲಾಖೆಯ ಉಪನಿರ್ದೇಶಕರಾದ ಬೈರಾರೆಡ್ಡಿ, ಸುಭಾಷ್ ಬಿ ಸಾತೇನಹಳ್ಳಿ, ಲಕ್ಷ್ಮೀ ಸಿಲ್ಕ್ ನ ಎ.ರಮೇಶ್, ಕೇಂದ್ರ ರೇಷ್ಮೆ ಮಂಡಳಿಯ ತಿಮ್ಮಾರೆಡ್ಡಿ, ಸಹಾಯಕ ನಿರ್ದೇಶಕ ನರಸಿಂಹಮೂರ್ತಿ, ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ನಾಗರಾಜ್, ಮೊಹಮ್ಮದ್ ಅನ್ವರ್, ಕೆ.ಆನಂದ್ ಕುಮಾರ್, ಎಸ್.ಸಮೀವುಲ್ಲ, ಗುಡಿಹಳ್ಳಿ ನಾರಾಯಣಸ್ವಾಮಿ, ಎಸ್.ಎಂ.ನಾರಾಯಣಸ್ವಾಮಿ, ಬಾಬಾಸಾಬ್, ಮುನಾವರ್ ಪಾಷ, ಜಿ.ರಹಮಾನ್ ಹಾಜರಿದ್ದರು.