Home News ರೈತರಿಗೆ ನೀಡುವ ಹಾಲಿನ ದರ ಇಳಿಕೆ ಅನಿವಾರ್ಯ

ರೈತರಿಗೆ ನೀಡುವ ಹಾಲಿನ ದರ ಇಳಿಕೆ ಅನಿವಾರ್ಯ

0

ಅಕ್ಟೋಬರ್ ಒಂದರಿಂದ ರೈತರಿಗೆ ನೀಡುವ ಹಾಲಿನ ದರದಲ್ಲಿ 1 ರೂಪಾಯಿ 30 ಪೈಸೆಯಷ್ಟು ಕಡಿತಗೊಳಿಸುವುದು ಅನಿವಾರ್ಯವಾಗಿದೆ ಎಂದು ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಹನುಮಂತಪುರ ಗ್ರಾಮದಲ್ಲಿ ಶುಕ್ರವಾರ ಹಾಲು ಉತ್ಪಾದಕರ ಸಹಕಾರ ಸಂಘದಿಂದ 11 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಕ್ಕೂಟವು ಈಗ 33 ಕೋಟಿ ನಷ್ಟದಲ್ಲಿರುವ ಕಾರಣ ಹಾಲಿನ ದರ ಕಡಿತಗೊಳಿಸಬೇಕಾಗಿದೆ. ಒಕ್ಕೂಟ ಉಳಿದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಉತ್ಪಾದಕರು ಉಳಿಯುತ್ತಾರೆ. ಬರುವ ಮಾರ್ಚ್ ತಿಂಗಳ ನಂತರ ಒಕ್ಕೂಟದ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿ ನಂತರ ಬೆಲೆ ಹೆಚ್ಚಿಸಲು ಪ್ರಯತ್ನಿಸುತ್ತೇವೆ. ತಾಲ್ಲೂಕಿನ 196 ಸಹಕಾರ ಸಂಘಗಳಿಂದ ಹಾಲು ಉತ್ಪಾದನೆ ಒಂದು ಲಕ್ಷ 16 ಸಾವಿರ ಲೀಟರಷ್ಟಿದ್ದು, ಗುಣಮಟ್ಟವನ್ನು ಶೇಕಡಾ 98 ರಷ್ಟು ಹೊಂದಿದ್ದು ಎರಡನೇ ಸ್ಥಾನದಲ್ಲಿದೆ. ಗುಣಮಟ್ಟವನ್ನು ಕಾಯ್ದುಕೊಂಡಲ್ಲಿ ಮಾತ್ರ ಹಾಲನ್ನು ರಫ್ತು ಮಾಡಲು ಸಾಧ್ಯ. ತಾಲ್ಲೂಕಿನ ಸಾದಲಿ ಹಾಗೂ ಗಂಭೀರನಹಳ್ಳಿಯಲ್ಲಿ ರೈತರೇ 20 ಎಕರೆ ನೀಡಲು ಮುಂದಾಗಿದ್ದಾರೆ. ಕೆ.ಎಂ.ಎಫ್ ನಿರ್ಧಾರದ ಮೇರೆಗೆ ಒಂದೆಡೆ 110 ಕೋಟಿ ರೂಗಳ ವೆಚ್ಚದಲ್ಲಿ ಹಸುಗಳ ಮೇವಿನ ಘಟಕವನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.
ನಂದಿನಿ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಗುಡಿಯಪ್ಪ ಮಾತನಾಡಿ, ಸುಮಾರು 24 ವರ್ಷಗಳ ಹಿಂದೆ 6 ಮಂದಿ ಹಾಲು ಉತ್ಪಾದಕರಿಂದ ದಿನ ಒಂದಕ್ಕೆ 60 ಲೀಟರ್ ಹಾಲು ಶೇಖರಣೆಯೊಂದಿಗೆ ಹನುಮಂತಪುರ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಪ್ರಾರಂಭವಾಯಿತು. ಈಗ ಸರಾಸರಿ ದಿನಕ್ಕೆ 580 ಲೀಟರ್ ಉತ್ಪಾದನೆಯಾಗುತ್ತಿದೆ. ಗುಣಮಟ್ಟವನ್ನೂ ಕಾಯ್ದುಕೊಳ್ಳಲಾಗಿದೆ. ಎನ್.ಸಿ.ಡಿ.ಸಿ ಸಾಲ 5 ಲಕ್ಷ ರೂ, ಕೆ.ಎಂ.ಎಫ್ ನಿಂದ 2 ಲಕ್ಷ ರೂಗಳ ಸಹಾಯಧನ ಪಡೆದು ಸಂಘವು ಸ್ವಂತ ಕಟ್ಟಡವನ್ನು ನಿರ್ಮಿಸಿಕೊಂಡಿದೆ. ಸದೃಢವಾದ ಸಂಘದಿಂದ ಗ್ರಾಮದಲ್ಲಿ ಸಾಮಾಜಿಕ ಕಾರ್ಯಗಳೂ ನಡೆಯಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಎಚ್.ವಿ.ಮಾರಪ್ಪ, ಟಿ.ಡಿ.ನಾರಾಯಣರಾವ್, ಲಕ್ಷ್ಮೀನಾರಾಯಣಪ್ಪ ಅವರನ್ನು ಸನ್ಮಾನಿಸಲಾಯಿತು.
ಹನುಮಂತಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎ.ಆರ್.ಮಹದೇವಯ್ಯ, ಕೋಚಿಮುಲ್ ವ್ಯವಸ್ಥಾಪಕ ಎ.ಬಿ.ಲೋಕೇಶ್, ಉಪವ್ಯವಸ್ಥಾಪಕ ಬಿ.ಎಸ್.ಹನುಮಂತರಾವ್, ವಿಸ್ತರಣಾಧಿಕಾರಿ ಎಚ್.ಎಸ್.ಉಮೇಶ್ರೆಡ್ಡಿ, ಕಾರ್ಯನಿರ್ವಾಹಕ ಎಚ್.ಎನ್.ನಾಗೇಶ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಯೋಜನಾಧಿಕಾರಿ ಡಿ.ಆರ್.ಯೋಗೇಶ್ ಕನ್ಯಾಡಿ, ಮಂಜುನಾಥ, ದೇವರಾಜ, ಸಹಕಾರ ಸಂಘದ ಶಾಮಣ್ಣ, ಮುನಿಕೃಷ್ಣಪ್ಪ, ಚಿಕ್ಕಬಚ್ಚಪ್ಪ, ಎಚ್.ಕೆ.ವೆಂಕಟೇಶಪ್ಪ, ಎಲ್.ಸೋಮಣ್ಣ, ಹನುಮಂತರೆಡ್ಡಿ, ಮುನಿನರಸಿಂಹಪ್ಪ, ಬಚ್ಚಮ್ಮ, ಸಾವಿತ್ರಮ್ಮ, ಗಂಗಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

error: Content is protected !!