Home News ರೈತರ ಉತ್ಪನ್ನಗಳಿಗೆ ರೈತರೇ ಬೆಲೆ ನಿಗದಿ ಪಡಿಸಲು ಸಾಧ್ಯ

ರೈತರ ಉತ್ಪನ್ನಗಳಿಗೆ ರೈತರೇ ಬೆಲೆ ನಿಗದಿ ಪಡಿಸಲು ಸಾಧ್ಯ

0

ರೈತರ ಉತ್ಪನ್ನಗಳಿಗೆ ರೈತರೇ ತಮ್ಮ ಶ್ರಮಕ್ಕೆ ತಕ್ಕಂತೆ ಬೆಲೆ ನಿಗದಿ ಪಡಿಸಲು ಮುಂದಿನ ದಿನಗಳಲ್ಲಿ ಯೋಜನೆಗಳನ್ನು ರೂಪಿಸಲು ಸಾಧ್ಯವಿದೆ ಎಂದು ರೇಷ್ಮೆ ಇಲಾಖೆಯ ಉಪನಿರ್ದೇಶಕ ಬಿ.ಆರ್.ನಾಗಭೂಷಣ್‌ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ಪೇಗೌಡನಹಳ್ಳಿಯಲ್ಲಿ ಸೋಮವಾರ ರೇಷ್ಮೆ ಇಲಾಖೆ ಮತ್ತು ಮೈರಾಡ ಸಂಸ್ಥೆಯ ಸಹಯೋಗದಲ್ಲಿ ರೇಷ್ಮೆ ರೈತ ಉತ್ಪಾದಕ ಸಂಸ್ಥೆ (ಎಫ್.ಪಿ.ಓ) ಯೋಜನೆಯಡಿ ೫೦ ನೇ ರೈತ ಆಸಕ್ತ ಗುಂಪಿನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಒಂದು ಲಕ್ಷ 34 ಸಾವಿರ ರೇಷ್ಮೆ ಬೆಳೆಗಾರರಿದ್ದು, 7 ಸಾವಿರ ರೀಲರುಗಳು ಇದ್ದು, ಕೆಲ ಸಂದರ್ಭಗಳಲ್ಲಿ ಅವರುಗಳು ಬೆಲೆ ನಿಗದಿ ಪಡಿಸುವಂತಾಗಿದೆ. ರೈತರು ಬೆಂಬಲ ಬೆಲೆಗೆ ಆಗ್ರಹಿಸುವುದರ ಬದಲಿಗೆ ತಮ್ಮ ಶ್ರಮದ ದುಡಿಮೆಗೆ ತಕ್ಕ ಫಲವನ್ನು ಪಡೆಯಬೇಕೆಂಬ ಉದ್ದೇಶದಿಂದ ರೈತ ಆಸಕ್ತ ಗುಂಪುಗಳನ್ನು ರಚಿಸಲಾಗುತ್ತಿದೆ. ರೈತರಿಗೆ ನೂತನ ತಾಂತ್ರಿಕತೆ ಹಾಗೂ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುವುದು, ರೇಷ್ಮೆ ಬೆಳೆಗಾರರಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ಮಧ್ಯವರ್ತಿಗಳ ಹಾವಳಿ ತಡೆಯುವ ಉದ್ದೇಶವಿದೆ ಎಂದರು.
ಸಮಾನ ಮನಸ್ಕ ರೇಷ್ಮೆ ಬೆಳೆಗಾರರನ್ನು ಒಂದುಗೂಡಿಸಿ ೨೦ ಮಂದಿಯಿರುವ ಸುಮಾರು ೫೦ ಗುಂಪುಗಳನ್ನು ರಚಿಸಲು ತಾಲ್ಲೂಕಿನಲ್ಲಿ ಹೆಚ್ಚಾಗಿ ರೇಷ್ಮೆ ಬೆಳೆಗಾರರಿರುವ ನಾಲ್ಕೈದು ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ ತಾಲ್ಲೂಕಿನಾಧ್ಯಂತ ೪೯ ರೈತ ಆಸಕ್ತ ಗುಂಪುಗಳನ್ನು ರಚಿಸಿದ್ದು ಇದೀಗ ೫೦ ನೇ ಗುಂಪಿನ ಉದ್ಘಾಟನೆ ನೆರವೇರಿಸಲಾಗಿದೆ. ಇದರ ಮಾರ್ಗದರ್ಶನವನ್ನು ಮೈರಾಡ ಸಂಸ್ಥೆ ಮಾಡುತ್ತದೆ. ಹಣಕಾಸಿನ ನೆರವನ್ನು ರೇಷ್ಮೆ ಇಲಾಖೆ ನಿರ್ವಹಿಸುತ್ತದೆ ಎಂದರು.
ಮೈರಾಡ ಸಂಸ್ಥೆಯ ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಯ ಕಾರ್ಯಕ್ರಮ ಅಧಿಕಾರಿ ಶಿವಶಂಕರ್ ಮಾತನಾಡಿ, ರೈತ ಆಸಕ್ತ ಗುಂಪು ರಚಿಸುವುದರಿಂದ ರೈತರ ಉತ್ಪಾದನೆ ಹೆಚ್ಚಾಗುವುದರ ಜೊತೆಗೆ ತಾವು ಬೆಳೆದ ರೇಷ್ಮೆ ಗೂಡಿಗೆ ಉತ್ತಮ ಬೆಲೆ ನಿಗಧಿ ಪಡಿಸುವ ಅವಕಾಶವೂ ಇರುತ್ತದೆ. ಉತ್ಪಾದನೆಗೆ ತಕ್ಕಂತೆ ಮಾರುಕಟ್ಟೆಯ ವ್ಯವಸ್ಥೆ ಮಾಡಿಕೊಳ್ಳುವ ಮೂಲಕ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಸಹಾಕರಿಯಾಗುತ್ತದೆ ಎಂದರು.
ರೈತ ಆಸಕ್ತ ಗುಂಪುಗಳನ್ನು ರಚಿಸಿಕೊಂಡರೆ ತಮ್ಮದೇ ಷೇರು ಮೊತ್ತದ ಜೊತೆಗೆ ಇಲಾಖೆಯಿಂದ ಸಿಗುವ ಸಹಾಯಧನವನ್ನು ಬಳಸಿಕೊಂಡು ಚಾಕಿ ಸಾಕಾಣಿಕೆ ಕೇಂದ್ರ, ರಸಗೊಬ್ಬರ ಮಳಿಗೆ ಮತ್ತು ರೇಷ್ಮೆ ಬಟ್ಟೆ ತಯಾರಿಕಾ ಘಟಕ ನಿರ್ಮಿಸಿಕೊಂಡರೆ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಜೊತೆಗೆ ತಮ್ಮ ಆದಾಯವೂ ಹೆಚ್ಚಾಗುತ್ತದೆ. ಹಾಗಾಗಿ ರೇಷ್ಮೆ ಬೆಳೆಗಾರರು ೨೦ ಮಂದಿಯನ್ನೊಳಗೊಂಡ ಒಂದೊಂದು ಗುಂಪು ರಚಿಸಿಕೊಂಡು ಆರ್ಥಿಕವಾಗಿ ಮುಂದುವರೆಯಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಶ್ರೀರಾಮ ಮತ್ತು ಶ್ರೀಮಾರುತಿ ರೈತ ಆಸಕ್ತ ಗುಂಪಿನ ಸದಸ್ಯರಿಗೆ ಪುಸ್ತಕ ಹಾಗು ಲೇಖನಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ರೇಷ್ಮೆ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಎ.ಎಂ.ತ್ಯಾಗರಾಜು, ಉಮಾ ಚನ್ನೇಗೌಡ, ರೇಷ್ಮೆ ರೈತ ಉತ್ಪಾದಕ ಸಂಸ್ಥೆಯ ಜಿಲ್ಲಾ ಸಂಯೋಜಕ ವೆಂಕಟರೆಡ್ಡಿ ಎಸ್ ಗಿರಣಿ, ಮೇಲೂರು ತಾಂತ್ರಿಕ ಸೇವಾ ಕೇಂದ್ರದ ಪ್ರವೀಣ್‌, ಸಂಪತ್‌, ಮಹೇಶ್‌ ಮತ್ತಿತರರು ಹಾಜರಿದ್ದರು.

error: Content is protected !!