ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ತೊಟ್ಟಿಬಾವಿ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಪವರ್ ಗ್ರೀಡ್ ಕಾರ್ಪೊರೇಷನ್ ವತಿಯಿಂದ ಅಳವಡಿಸುತ್ತಿರುವ ಪವರ್ ಲೈನ್ ನಿರ್ಮಾಣಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ರೈತರ ಜಮೀನಿನಲ್ಲಿ ದೊಡ್ಡ ಗಾತ್ರದ ಕಂಬಗಳನ್ನು ನಿರ್ಮಿಸಿ ವಿದ್ಯುತ್ ತಂತಿಯನ್ನು ಎಳೆಯಲು ಮುಂದಾದಾಗ ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ಪದಾಧಿಕಾರಿಗಳು ಅಡ್ಡಿಪಡಿಸಿದ ಘಟನೆ ಮಂಗಳವಾರ ನಡೆದಿದೆ.
ಬಯಲುಸೀಮೆ ಭಾಗದಲ್ಲಿ ಅಂತರ್ಜಲ ಕುಸಿದು ನೀರಿನ ಸಮಸ್ಯೆಯು ಹೆಚ್ಚಾಗಿದ್ದು ಕಷ್ಟ ಪಟ್ಟು ಲಕ್ಷಾಂತರ ರೂ ಹಣ ಖರ್ಚು ಮಾಡಿ ಕೊರೆಸಿರುವ ಕೊಳವೆಬಾವಿಗಳಿಂದ ಬರುವ ಅಲ್ಪ ಸ್ವಲ್ಪ ನೀರನ್ನೇ ನಂಬಿಕೊಂಡು ವ್ಯವಸಾಯ ಮಾಡುವಂತಾಗಿದೆ. ಇಂತಹ ಸಂದರ್ಭದಲ್ಲಿ ರೈತರಿಗೆ ಯಾವುದೇ ಮಾಹಿತಿ ನೀಡದೇ ಮತ್ತು ನೋಟಿಸ್ ನೀಡದೆ ಏಕಾಏಕಿ ಯಂತ್ರಗಳನ್ನು ರೈತರ ಜಮೀನಿನಲ್ಲಿ ಬೆಳೆಗಳು ಇದ್ದರೂ ಸಹ ಜಮೀನಿನ ಮದ್ಯೆ ಬೃಹತ್ ವಿದ್ಯುತ್ ಕಂಬಗಳನ್ನು ನೆಡುವುದು ಸರಿಯಲ್ಲ. ಇದರಿಂದ ತಾವು ಬೆಳೆದ ಬೆಳೆಗಳು ಹಾಳಾಗುತ್ತದೆ. ಈ ಬೆಳೆಗಳನ್ನೇ ನಂಬಿ ಬದುಕು ನಡೆಸುತ್ತಿರುವ ನಾವು ಜೀವನ ನಡೆಸುವುದಾದರು ಹೇಗೆ ಎಂದು ತಮ್ಮ ಅಳಲನ್ನು ತೋಡಿಕೊಂಡ ರೈತರು ಜಮೀನಿನೊಳಗೆ ಅಳವಡಿಸುವ ವಿದ್ಯುತ್ ಕಂಬವನ್ನು ತಮ್ಮದೇ ಜಮೀನಿನ ಅಂಚಿನಲ್ಲಿ ಅಳವಡಿಸುವಂತೆ ರೈತ ಕೃಷ್ಣಪ್ಪ ಮನವಿ ಮಾಡಿದರು.
ಸ್ಥಳಕ್ಕೆ ತಹಶೀಲ್ದಾರ್ ಕೆ.ಎಂ.ಮನೋರಮ ಸೇರಿದಂತೆ ಪವರ್ ಗ್ರೀಡ್ ಕಾರ್ಪೊರೇಷನ್ ಕಿಶೋರ್ ಭೇಟಿ ನೀಡಿ ರೈತ ಮುಖಂಡರ ಮನವಿಯನ್ನು ಸ್ವೀಕರಿಸಿ ರೈತ ಕೃಷ್ಣಪ್ಪ ತಾನು ಬೆಳೆದಿರುವ ದ್ರಾಕ್ಷಿ ಬೆಳೆಯ ಫಸಲು ಪಡೆಯಲು ಕೋರಿರುವ ಒಂದು ತಿಂಗಳ ಕಾಲ ಕಾಮಗಾರಿ ಸ್ಥಗಿತಗೊಳಿಸುವುದು ಸೇರಿದಂತೆ ನಂತರ ಇದೀಗ ಕಂಬ ನೆಡಲು ಉದ್ದೇಶಿಸಿರುವ ಜಾಗಕ್ಕಿಂತ ೧೫ ಅಡಿಗಳ ದೂರದಲ್ಲಿ ಕಂಬ ನೆಡುವುದಾಗಿ ತಿಳಿಸಿ ಕಾಮಗಾರಿ ಸ್ಥಗಿತಗೊಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ಮುನಿನಂಜಪ್ಪ, ದೇವರಾಜ್, ಈರಪ್ಪ, ವೆಂಕಟರೋಣಪ್ಪ, ತಲದುಮ್ಮನಹಳ್ಳಿ ದೇವರಾಜ್ ಮತ್ತಿತರರು ಹಾಜರಿದ್ದರು.