ಹೈನುಗಾರಿಕೆಯಿಂದ ಜೀವನ ಸಾಗಿಸುತ್ತಿರುವ ರೈತರ ಹಕ್ಕೊತ್ತಾಯಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ರೈತ ಸಂಘದ ಮುಖಂಡರು ಶುಕ್ರವಾರ ಕೋಚಿಮುಲ್ ಉಪವ್ಯವಸ್ಥಾಪಕ ಚಂದ್ರಶೇಖರ್ ಅವರಿಗೆ ಮನವಿಯನ್ನು ಸಲ್ಲಿಸಿದರು.
ತಾಲ್ಲೂಕಿನಲ್ಲಿ ಲಾಕ್ ಡೌನ್ ದಿನದಿಂದ ಬೂಸಾ, ಹಿಂಡಿ, ಫೀಡ್ ಗಳ ಬೆಲೆ ಗಗನಕ್ಕೇರಿದೆ. ಒಂದೊಂದು ಕಡೆ ಒಂದೊಂದು ಬೆಲೆಯಿದೆ. ಅಂಗಡಿಗಳ ಮುಂದೆ ದರ ಪಟ್ಟಗಳ ಫಲಕವನ್ನು ಹಾಕಲು ಕ್ರಮ ಕೈಗೊಳ್ಳಬೇಕು ಮತ್ತು ರೈತರ ಬಳಿ ಹೆಚ್ಚಿನ ಬೆಲೆ ಪಡೆಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸೀಮೆಹಸು ಅಥವಾ ಎಮ್ಮೆಗಳು ಕೆಳಗೆ ಬಿದ್ದಾಗ ಮೇಲೆತ್ತುವ ಯಂತ್ರವನ್ನು ಕೋಚಿಮುಲ್ ವತಿಯಿಂದ ತರಿಸಬೇಕು. ತಾಲ್ಲೂಕಿನಲ್ಲಿ ಏಪ್ರಿಲ್ ತಿಂಗಳಿನಲ್ಲಿ ಕಾಲು ಬಾಯಿ ಜ್ವರದ ಲಸಿಕೆ ಹಾಕಬೇಕಿತ್ತು. ಆದರೆ ಇದುವರೆಗೂ ಹಾಕಿಲ್ಲ, ತಕ್ಷಣ ಹಾಕಿಸಬೇಕು. ಕುರಿ ಮೇಕೆ ಹಸು ಎಮ್ಮೆಗಳಿಗೆ ಏನಾದರೂ ಮೂಳೆ ಹಾಗೂ ನರಗಳಿಗೆ ಸಮಸ್ಯೆ ಆದಾಗ ಸಂಬಂಧಪಟ್ಟ ಎಂ.ಪಿ.ಸಿ.ಎಸ್ ಜವಾಬ್ದಾರಿ ತೆಗೆದುಕೊಂಡು ಸ್ಕ್ಯಾನಿಂಗ್, ಎಕ್ಸ್ ರೇ ಮಾಡಿಸಿ ಸೂಕ್ತ ಚಿಕಿತ್ಸೆ ಕೊಡಿಸಲು ಕ್ರಮ ವಹಿಸಬೇಕು ಎಂದು ಮನವಿ ಸಲ್ಲಿಸಿದರು.
ರೈತ ಸಂಘದ ಮುಖಂಡರು ಉಪ ತಹಶೀಲ್ದಾರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ರೈತರ ಸಮಸ್ಯೆ ಬಗ್ಗೆ ದೂರು ನೀಡಲು ಬಂದ ರೈತ ಮಹಿಳೆ ನಳಿನಿ ಅವ್ರೊಂದಿಗೆ ಅನುಚಿತವಾಗಿ ವರ್ತಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ದರ್ಪ ತೋರಿದ ಸಚಿವ ಮಧುಸ್ವಾಮಿ ವಿರುದ್ಧ ಕ್ರಮ ಜರುಗಿಸಬೇಕೆಂದು ಮನವಿ ಸಲ್ಲಿಸಿದರು.
ರೈತ ಸಂಘದ ಬೆಳ್ಳೂಟಿ ಮುನಿಕೆಂಪಣ್ಣ, ಭಕ್ತರಹಳ್ಳಿ ಪ್ರತೀಶ್, ರಮೇಶ್ ಕುಮಾರ್, ವೆಂಕಟೇಶಪ್ಪ, ಅಂಬರೀಷ, ನಾರಾಯಣಸ್ವಾಮಿ ಹಾಜರಿದ್ದರು.