Home News ಲೋಕಸಭೆ ಚುನಾವಣೆಗಾಗಿ ಬೇರುಮಟ್ಟದಿಂದ ಜೆಡಿಎಸ್ ಪಕ್ಷಸಂಘಟನೆ – ಬಿ.ಎನ್.ರವಿಕುಮಾರ್

ಲೋಕಸಭೆ ಚುನಾವಣೆಗಾಗಿ ಬೇರುಮಟ್ಟದಿಂದ ಜೆಡಿಎಸ್ ಪಕ್ಷಸಂಘಟನೆ – ಬಿ.ಎನ್.ರವಿಕುಮಾರ್

0

ಪ್ರಸ್ತುತ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲು ಎಸೆಯಬಲ್ಲ ಪ್ರಮುಖ ಪ್ರತಿಪಕ್ಷ ನಾಯಕರಾದ ಪ್ರಧಾನಿ ದೇವೇಗೌಡರು ಮುಂದಿನ ಲೋಕಸಭೆ ಚುನಾವಣೆಗಾಗಿ ಪಕ್ಷಸಂಘಟನೆ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಹಣಿಯಲು ಬೇರುಮಟ್ಟದಿಂದ ಜೆಡಿಎಸ್ ಸದೃಢಗೊಳಿಸಲಾಗುತ್ತಿದೆ ಎಂದು ಜೆಡಿಎಸ್ ಮುಖಂಡ ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ಅಮೀರ್ ಬಾಬಾ ದರ್ಗಾ ಆವರಣದಿಂದ ಗುರುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಜೆಡಿಎಸ್ ಅಲ್ಪಸಂಖ್ಯಾತರ ಸಮಾವೇಶಕ್ಕೆ, ಸುಮಾರು ೨೦ ಬಸ್ಸುಗಳಲ್ಲಿ ಹಾಗೂ ವಿವಿಧ ವಾಹನಗಳಲ್ಲಿ ಹೊರಟ ಒಂದೂವರೆ ಸಾವಿರ ಮಂದಿ ಜೆಡಿಎಸ್ ಮುಸ್ಲಿಂ ಕಾರ್ಯಕರ್ತರನ್ನು ಬೀಳ್ಕೊಟ್ಟು ಅವರು ಮಾತನಾಡಿದರು.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ಅಲ್ಪಸಂಖ್ಯಾತರ ಸಮಾವೇಶ ನಡೆಯಲಿದ್ದು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಹ ಭಾಗವಹಿಸಲಿದ್ದಾರೆ. ಜೆಡಿಎಸ್‌ನ ಎಲ್ಲ ಶಾಸಕರು, ಸಚಿವರು, ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು, ಅಲ್ಪಸಂಖ್ಯಾತರ ಘಟಕದ ಮುಖಂಡರು ಭಾಗವಹಿಸಲಿದ್ದಾರೆ. ಮುಂದಿನ ಲೋಕಸಭೆ ಚುನಾವಣೆ ಕಾರ್ಯತಂತ್ರ ಹಾಗೂ ಪಕ್ಷ ಸಂಘಟನೆ ಬಗ್ಗೆ ಸಮಾವೇಶದಲ್ಲಿ ಚರ್ಚೆ ನಡೆಯಲಿದೆ. ಕೆಲವೊಂದು ನಿರ್ಣಯ ಕೈಗೊಳ್ಳಲಾಗುತ್ತದೆ. ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸಮ್ಮಿಶ್ರ ಸರ್ಕಾರದಲ್ಲಿ ಕೈಗೊಂಡಿರುವ ಯೋಜನೆಗಳನ್ನು ಜನರಿಗೆ ತಿಳಿಸುವುದು ಸಹ ಸಮಾವೇಶದ ಉದ್ದೇಶವಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ಶಿಡ್ಲಘಟ್ಟ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಸಕ್ರಿಯವಾಗಿದೆ. ಕ್ಷೇತ್ರದ ಜೆಡಿಎಸ್ ಮುಖಂಡ ಬಿ.ಎನ್.ರವಿಕುಮಾರ್, ಪಕ್ಷದ ಕಾರ್ಯಕರ್ತರ ಬೆನ್ನೆಲುಬಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜೆ.ಡಿ.ಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕು. ಜೆ.ಡಿ.ಎಸ್ ಪಕ್ಷ ಬಿ.ಜೆ.ಪಿ ಪಕ್ಷದೊಂದಿಗೆ ಕೈಜೋಡಿಸಿ ಸರ್ಕಾರ ರಚನೆ ಮಾಡುವುದೆಂಬ ಸುಳ್ಳು ಸುದ್ದಿ ಹಬ್ಬಿಸಿದ್ದನ್ನು ನಂಬಿದ ಅಲ್ಪಸಂಖ್ಯಾತರು ಜೆ.ಡಿ.ಎಸ್ ಪಕ್ಷಕ್ಕೆ ಮತ ನೀಡಿಲ್ಲ. ಇದು ಸುಳ್ಳು ಎಂಬುದು ಈಗ ಎಲ್ಲರಿಗೂ ಮನವರಿಕೆಯಾಗಿದೆ. ಯಾವುದೇ ಕಾರಣಕ್ಕೂ ಬಿ.ಜೆ.ಪಿ ಪಕ್ಷದೊಂದಿಗೆ ಜೆಡಿಎಸ್ ಕೈ ಜೋಡಿಸುವುದಿಲ್ಲ ಎಂದು ಸ್ವಷ್ಟನೆ ನೀಡಿದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶ್, ಮುಖಂಡರಾದ ಪಿ.ವಿ.ನಾಗರಾಜ್, ಹುಜಗೂರು ರಾಮಣ್ಣ, ಆದಿಲ್, ಸಿಖಂದರ್, ಷಫಿ, ಅಮ್ಜದ್, ಮಹಬೂಬ್ ಪಾಷ, ಲಕ್ಷ್ಮಿನಾರಾಯಣ, ತಾದೂರು ರಘು, ರಾಜಶೇಖರ್, ಧರ್ಮೇಂದ್ರ, ಯೂಸುಫ್, ನಯಾಜ್, ಸುಹೇಲ್, ಬಾಬು, ಅಮೀರ್ ಜಾನ್ ಹಾಜರಿದ್ದರು.

error: Content is protected !!