Home News ವಲಸೆ ತಡೆಯಲು ರೈತರಿಗಾಗಿ ವಿಶೇಷ ಗ್ರಾಮಸಭೆ

ವಲಸೆ ತಡೆಯಲು ರೈತರಿಗಾಗಿ ವಿಶೇಷ ಗ್ರಾಮಸಭೆ

0

ಬಯಲು ಸೀಮೆ ಭಾಗದಲ್ಲಿ ಮಳೆಯ ಅಭಾವವಿರುವುದರಿಂದ ರೈತರು ಹಾಗೂ ಇತರ ಜನರು ಕೆಲಸ ಅರಸಿ ಬೇರೆಡೆಗೆ ಹೋಗುವುದನ್ನು ತಡೆಗಟ್ಟುವ ಉದ್ದೇಶದಿಂದ ಜಿಲ್ಲೆಯಾದ್ಯಂತ ರೈತರಿಗಾಗಿ ವಿಶೇಷ ಗ್ರಾಮಸಭೆಯನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ಅಬ್ಲೂಡು ಗ್ರಾಮದ ಸರ್ಕಲ್ ಬಳಿಯಿರುವ ಸಪ್ಪಲಮ್ಮ ದೇವಸ್ಥಾನದ ಬಳಿ ಗುರುವಾರ ಏರ್ಪಡಿಸಲಾಗಿದ್ದ ರೈತರಿಗಾಗಿ ವಿಶೇಷ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು.
ಈ ಹಿಂದೆ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮಸಭೆಗಳು ನಡೆಯುತ್ತಿದ್ದವಾದರೂ ನಾಗರಿಕರಿಗೆ ವಿವಿಧ ಇಲಾಖೆಗಳಿಂದ ಸಿಗುವ ಸವಲತ್ತುಗಳ ಮಾಹಿತಿ ದೊರಕುತ್ತಿರಲಿಲ್ಲ. ಹಾಗಾಗಿ ಇದೀಗ ರೈತರಿಗಾಗಿ ವಿಶೇಷ ಗ್ರಾಮಸಭೆಗಳು ನಡೆಸಿ ಆ ಭಾಗದ ರೈತರ ಸಮಸ್ಯೆಗಳನ್ನು ಆಲಿಸುವ ಜೊತೆಗೆ ರೈತರಿಗೆ ವಿವಿಧ ಇಲಾಖೆಗಳಿಂದ ಸಿಗುವ ಸವಲತ್ತುಗಳ ಮಾಹಿತಿಯನ್ನು ನೀಡುವುದು ಮತ್ತು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಏನೆಲ್ಲಾ ಕಾಮಗಾರಿಗಳನ್ನು ಮಾಡಬಹುದು ಎನ್ನುವುದರ ಮಾಹಿತಿ ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗುರುದತ್ ಹೆಗಡೆ ಮಾತನಾಡಿ, ಈಗಾಗಲೇ ಜಿಲ್ಲಾದ್ಯಂತ ಇರುವ ರೈತ ಕುಟುಂಬಗಳಿಗೆ ಸುಮಾರು ೨೫ ಸಾವಿರ ಉದ್ಯೋಗ ಚೀಟಿಗಳನ್ನು ವಿತರಿಸಲಾಗಿದ್ದು ಇನ್ನೂ ಮಾಡಿಸದೇ ಇರುವವರು ಕೂಡಲೇ ಮಾಡಿಸಿಕೊಳ್ಳಬೇಕು ಎಂದರು.
ಅಬ್ಲೂಡು ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ತಾಲ್ಲೂಕಿನ ಅಬ್ಲೂಡು ಗ್ರಾಮ ಬೇರೆಲ್ಲಾ ಗ್ರಾಮಗಳಿಗಿಂತ ಮುಂದುವರೆದ ಗ್ರಾಮವಾಗಿದ್ದು ಇಲ್ಲಿನ ಬಹುತೇಕ ರೈತರು ರೇಷ್ಮೆಯನ್ನೇ ಜೀವನಾಧಾರವನ್ನಾಗಿಸಿಕೊಂಡಿದ್ದಾರೆ. ನರೇಗಾ ಯೋಜನೆ ಸೇರಿದಂತೆ ವಿವಿಧ ಇಲಾಖೆಗಳಿಂದ ಸಿಗುವ ಸವಲತ್ತುಗಳನ್ನು ಬಳಸಿಕೊಂಡು ಮತ್ತಷ್ಟು ಆರ್ಥಿಕವಾಗಿ ಮುಂದುವರೆಯಬೇಕು ಎಂದರು.
ರೈತ ಸಂಘದಿಂದ ಮನವಿ
ರೈತರು ವ್ಯವಸಾಯ ಮಾಡಲು ಅಗತ್ಯವಾಗಿ ಬೇಕಾಗಿರುವುದು ನೀರು. ಆದರೆ ತಾಲ್ಲೂಕಿನ ಬಹುತೇಕ ಕೆರೆ ಕುಂಟೆಗಳು ಒತ್ತುವರಿಯಾಗಿದೆ. ಮತ್ತಷ್ಟು ಕೆರೆಗಳಲ್ಲಿ ಜಾಲಿ ಗಿಡಗಳು ಬೆಳೆದುನಿಂತಿವೆ. ಬೀಳುವ ಅಲ್ಪ ಪ್ರಮಾಣದ ಮಳೆಯ ನೀರು ಸಹ ಎಲ್ಲಿಯೂ ಶೇಖರಣೆಯಾಗುವುದಿಲ್ಲ. ಇನ್ನು ಇಡೀ ಏಷ್ಯಾ ಖಂಡದಲ್ಲಿಯೇ ರೇಷ್ಮೆಗೆ ಹೆಸರುವಾಸಿಯಾಗಿರುವ ಇಲ್ಲಿನ ಮಾರುಕಟ್ಟೆಯನ್ನು ಈವರೆಗೂ ಹೈಟೆಕ್ ಮಾರುಕಟ್ಟೆಯನ್ನಾಗಿಸಿಲ್ಲ. ನಗರದಲ್ಲಿ ರೇಷ್ಮೆ ತ್ಯಾಜ್ಯ ಪೀಪಾ ಘಟಕಗಳಿಂದ ಹೊರಬರುವ ದುರ್ವಾಸನೆಯಿಂದ ನಗರದ ಜನತೆಯಲ್ಲಿ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ಹಲವಾರು ಭಾರಿ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಖಾಸಗಿ ಶಾಲೆಗಳಲ್ಲಿ ಡೋನೆಷನ್ ಹಾವಳಿ ನಿಂತಿಲ್ಲ. ಕೂಡಲೇ ಇವೆಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ಪದಾಧಿಕಾರಿಗಳು ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್ ಮಾತನಾಡಿ, ಜಿಲ್ಲೆಯಾದ್ಯಂತ ಇರುವ ಕೆರೆ, ರಾಜಕಾಲುವೆ, ಗೋಕುಂಟೆ ಒತ್ತುವರಿಯನ್ನು ಆದಷ್ಟು ಬೇಗ ತೆರವುಗೊಳಿಸಲಾಗುವುದು. ನೀಲಗಿರಿ, ಜಾಲಿ ಮರಗಳನ್ನು ತೆಗೆಸಲು ಕ್ರಮ ಕೈಗೊಳ್ಳಲಾಗುವುದು. ಅತ್ಯಾದುನಿಕ ತಂತ್ರಜ್ಞಾನ ಬಳಸಿ ಜಿಲ್ಲೆಯನ್ನು ಸ್ಯಾಟಲೈಟ್ ಸರ್ವೆ ಮಾಡುವ ಕ್ರಮ ಜಾರಿಯಲಿದ್ದು, ಈಗಾಗಲೇ ಕೆಲ ತಾಲ್ಲೂಕುಗಳ ಸರ್ವೆ ಕಾರ್ಯ ಮುಗಿದಿದೆ. ತಾಲ್ಲೂಕನ್ನು ಸಹ ಸರ್ವೆ ಮಾಡಿ ವರದಿ ಬಂದ ನಂತರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜಾರಘು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ತಹಸಿಲ್ದಾರ್ ಅಜಿತ್ ಕುಮಾರ್ ರೈ, ನರೇಗಾ ಸಹಾಯಕ ನಿರ್ದೇಶಕ ಶ್ರೀನಾಥಗೌಡ, ಅಬ್ಲೂಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ, ಉಪಾಧ್ಯಕ್ಷೆ ಕೃಷ್ಣಮ್ಮ ಹಾಜರಿದ್ದರು.

error: Content is protected !!