Home News ವಿದೇಶಿ ಹಾಲು ಆಮದು ನಿರ್ಧಾರ ಕೈಬಿಡಲು ಜೆಡಿಎಸ್ ಮುಖಂಡರ ಆಗ್ರಹ

ವಿದೇಶಿ ಹಾಲು ಆಮದು ನಿರ್ಧಾರ ಕೈಬಿಡಲು ಜೆಡಿಎಸ್ ಮುಖಂಡರ ಆಗ್ರಹ

0

ಜಿಲ್ಲೆಯಲ್ಲಿ ಹೈನುಗಾರಿಕೆ ಮತ್ತು ರೇಷ್ಮೆಯನ್ನು ಅವಲಂಬಿಸಿ ಲಕ್ಷಾಂತರ ಮಂದಿ ಜೀವನ ನಡೆಸುತ್ತಿದ್ದಾರೆ. ರೇಷ್ಮೆ ಆಮದಿಗೆ ಸುಂಕವನ್ನು ಕಡಿತ ಮಾಡಿ ಕೇಂದ್ರ ಸರ್ಕಾರ ರೇಷ್ಮೆ ಅವಲಂಬಿತರ ಬದುಕಿಗೆ ಕೊಳ್ಳಿ ಇಟ್ಟಿದ್ದು, ಇದೀಗ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಮೂಲಕ ಹೈನುಗಾರಿಕೆಯನ್ನು ಅವಲಂಬಿತರ ಬೆನ್ನು ಮೂಳೆ ಮುರಿದಿದೆ. ರೈತರನ್ನು ಒಗ್ಗೂಡಿಸಿ ಜೆಡಿಎಸ್ ಪಕ್ಷದ ವತಿಯಿಂದ ಈ ಬಗ್ಗೆ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದ ಬಸ್ ನಿಲ್ದಾಣದ ಬಳಿಯ ಎಸ್.ಎಲ್.ಎನ್ ಭವನದಲ್ಲಿ ಗುರುವಾರ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಕೋಚಿಮುಲ್ ಹಾಗೂ ಕೆ.ಎಂ.ಎಫ್ ಚುನಾಯಿತ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಕೇಂದ್ರ ಸರ್ಕಾರದ ಈ ರೈತ ವಿರೋಧಿ ನೀತಿಯನ್ನು ಖಂಡಿಸಬೇಕು. ಕೇಂದ್ರ ಸರ್ಕಾರದ ಈ ರೈತ ವಿರೋಧಿ ನಡೆಯಿಂದ ದೇಶದ ಹೈನುಗಾರಿಕೆ ಮೇಲೆ ಅದರಲ್ಲೂ ಕರ್ನಾಟಕ ಹಾಗೂ ಗುಜರಾತ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಇದರಿಂದ ಲಕ್ಷಾಂತರ ಜನರ ಬದುಕು ಬೀದಿಗೆ ಬೀಳಲಿದೆ. ಗುಜರಾತ್ ರಾಜ್ಯದವರಾಗಿದ್ದಾಗ್ಯೂ ಪ್ರಧಾನಿ ಮೋದಿಯವರು ಈ ನಿರ್ಧಾರ ಕೈಗೊಂಡಿರುವುದು ದುರದೃಷ್ಟಕರ. ವಿದೇಶದ ಹಾಲು ಬಂದರೆ, ನಮ್ಮ ರೈತರು ಬೆಲೆಕುಸಿತದಿಂದ ನೆಲಕಚ್ಚುತ್ತಾರೆ. ಸರ್ಕಾರ ಹೈನುಗಾರರ ಹಿತ ಕಾಪಾಡಬೇಕು. ಜೆ.ಡಿ.ಎಸ್ ಪಕ್ಷವು ರೈತರ ಹಿತಾಸಕ್ತಿಗೆ ಬದ್ಧವಾಗಿದ್ದು, ರೈತರ ಪರವಾಗಿ ಹೋರಾಟ ಮಾಡುವುದಾಗಿ ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ನಮ್ಮ ರಾಜ್ಯವು ಹಾಲು ಉತ್ಪಾದನೆಯಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ೧೪ ಹಾಲು ಒಕ್ಕೂಟಗಳು ಕಾರ್ಯನಿರ್ವಹಿಸುತ್ತಿದ್ದು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ೨,೨೩,೮೦೦ ಹಾಲು ಉತ್ಪಾದಕ ಕುಟುಂಬಗಳಿವೆ. ಪ್ರತಿ ದಿನ ಎರಡೂ ಜಿಲ್ಲೆಗಳಲ್ಲಿ ೧೦.೫೦ ಲಕ್ಷ ಲೀಟರ್ ಹಾಲು ಉತ್ಪಾದನೆಯಾದರೆ, ರಾಜ್ಯದಲ್ಲಿ ಪ್ರತಿದಿನ ೭೬.೪೪ ಲಕ್ಷ ಲೀಟರ್ ಹಾಲು ಉತ್ಪಾದಿಸಲಾಗುತ್ತಿದೆ. ನಮ್ಮ ಜಿಲ್ಲೆಗಳ ರೈತರ ಜೀವನಾಡಿಯಾದ ಹೈನುಗಾರಿಕೆಯ ರೂವಾರಿ ದಿ.ಎಂ.ವಿ.ಕೃಷ್ಣಪ್ಪ ಅವರನ್ನು ರೈತರು ಸದಾ ನೆನೆಯುವರು. ಪ್ರಧಾನಿ ನರೇಂದ್ರ ಮೋದಿಯವರು ವಿದೇಶಗಳಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ತೆರಿಗೆ ರಹಿತ ಅನುಮತಿಯನ್ನು ನೀಡಿ ರೈತ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಪ್ರತಿದಿನ ಸುಮಾರು ಒಂದು ಲಕ್ಷ ಲೀಟರ್ ಹಾಲನ್ನು ಪೌಡರ್ ಮಾಡಿ ಒಂದು ಲೀಟರ್ ಹಾಲಿಗೆ ೭ ರಿಂದ ೮ ರೂಪಾಯಿ ನಷ್ಟವನ್ನುಂಟು ಮಾಡಿಕೊಳ್ಳುತ್ತಿರುವ ಒಕ್ಕೂಟಕ್ಕೆ ಹಾಗೂ ಅದನ್ನು ನಂಬಿರುವ ರೈತರಿಗೆ ಈ ನೀತಿ ಕರಾಳವಾಗಿದೆ ಎಂದು ಹೇಳಿದರು.
ಜೆ.ಡಿ.ಎಸ್ ತಾಲ್ಲೂಕು ಅಧ್ಯಕ್ಷ ಡಿ.ಬಿ.ವೆಂಕಟೇಶ್ ಮಾತನಾಡಿ, ಕೇಂದ್ರ ಸರ್ಕಾರ ಆಮದು ಸುಂಕ ಕಡಿತ ಮಾಡಿ ಚೀನಾದಿಂದ ರೇಷ್ಮೆ ಬರುವಂತೆ ಮಾಡಿ ರೇಷ್ಮೆ ಕೃಷಿಕರಿಗೆ ಮತ್ತು ಉದ್ದಿಮೆದಾರರಿಗೆ ಹೊಡೆತ ಕೊಟ್ಟಿದೆ. ಕೆಂಪು ಗುಲಾಬಿ ಈರುಳ್ಳಿ ರಫ್ತು ಮಾಡುವುದನ್ನು ನಿಲ್ಲಿಸಿ ಅದರ ಬೆಲೆ ಕುಸಿದು ರೈತರನ್ನು ಕಣ್ಣೀರಿಡುವಂತೆ ಮಾಡಿದೆ. ಅಂತರ್ಜಲ ಕುಸಿದಿದ್ದರೂ ಕಷ್ಟದಲ್ಲಿಯೂ ಹೈನುಗಾರಿಕೆಯನ್ನು ನಂಬಿರುವ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರು ಈಗ ಕೇಂದ್ರದ ವಿದೇಶಿ ಹಾಲು ಆಮದಿನಿಂದ ಕುಸಿದುಹೋಗಿದ್ದಾರೆ. ತಕ್ಷಣವೇ ಕೇಂದ್ರ ಸರ್ಕಾರ ಈ ನೀತಿಯನ್ನು ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದಲ್ಲಿ ರೈತರೊಂದಿಗೆ ಪ್ರತಿಭಟನೆ ಮಾಡುವುದಾಗಿ ಹೇಳಿದರು.
ಜೆಡಿಎಸ್ ಮುಖಂಡ ಮುಗಿಲಡಿಪಿ ನಂಜಪ್ಪ ಮಾತನಾಡಿ, ಒಂದು ವೇಳೆ ಭಾರತ ನ್ಯೂಜಿಲ್ಯಾಂಡ್‌ ಜತೆಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡು ಹಾಲಿನ ಆಮದು ಮಾಡಿಕೊಳ್ಳಲು ಆರಂಭಿಸಿದರೆ, ದೇಶದಲ್ಲಿ ಹೈನುಗಾರಿಕೆಯನ್ನು ನಂಬಿಕೊಂಡಿರುವ ಕುಟುಂಬಗಳನ್ನು ಸರ್ಕಾರವೇ ಬೀದಿಗೆ ತಳ್ಳಿದಂತಾಗುತ್ತದೆ. ವಿದೇಶಿ ಸಂಸ್ಥೆಗಳು ಆರಂಭದಲ್ಲಿ ಕಡಿಮೆ ದರಕ್ಕೆ ಹಾಲು ನೀಡಿ, ಮಾರುಕಟ್ಟೆಯನ್ನು ವಶಪಡಿಸಿಕೊಂಡ ನಂತರ, ಹಾಲಿನ ಬೆಲೆ ಹೆಚ್ಚಳ ಮಾಡುವ ಸಾಧ್ಯತೆ ಇದೆ. ವಿದೇಶಿ ಸಂಸ್ಥೆಗಳು ನೇರವಾಗಿ ಮಾರುಕಟ್ಟೆ ಪ್ರವೇಶ ಮಾಡುವುದರಿಂದ ಹಾಲಿನ ದರ ನಿಯಂತ್ರಿಸಲೂ ರಾಜ್ಯ ಸರ್ಕಾರಗಳಿಗೆ ಅಧಿಕಾರ ಇಲ್ಲದಂತಾಗುತ್ತದೆ. ಇದರಿಂದ ಹೈನುಗಾರಿಕೆ ನಂಬಿರುವ ಕುಟುಂಬಗಳು ಬೀದಿಗೆ ಬೀಳುವಂತಾಗುತ್ತದೆ. ರೈತರನ್ನು ಸರ್ಕಾರವೇ ಪರೋಕ್ಷವಾಗಿ ಕೊಲ್ಲುವ ನೀತಿಯಿದು ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ಮುಖಂಡರಾದ ತಾದೂರು ರಘು, ಪಿ.ವಿ.ನಾಗರಾಜ್, ಲಕ್ಷ್ಮೀನಾರಾಯಣ್, ಆರ್.ಎ.ಉಮೇಶ್, ರಮೇಶ್ ಹಾಜರಿದ್ದರು.

error: Content is protected !!