ತಾಲ್ಲೂಕಿನ ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ವಿದ್ಯಾರ್ಥಿಗಳಿಗೆ ಬಿ.ಎಂ.ಎಸ್.ಐ.ಟಿ ಎಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಶ್ರೀವಾಣಿ ನೋಟ್ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.
ಚಿಕ್ಕ ವಯಸ್ಸಿನಿಂದಲೇ ಮುಂದೆ ತಾವು ಏನಾಗಬೇಕು ಎಂಬ ಕನಸನ್ನು ಬೆಳೆಸಿಕೊಳ್ಳಬೇಕು. ಗುರಿಯನ್ನು ತಲುಪಬೇಕಾದ ಹಾದಿಯ ಬಗ್ಗೆ ಹಿರಿಯರಿಂದ ಮಾರ್ಗದರ್ಶನ ಪಡೆಯಬೇಕು ಎಂದು ಅವರು ತಿಳಿಸಿದರು.
ನಿಮಗೆ ಖುಷಿಕೊಡುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಿ. ಸಾಧಕೋ ವಿದ್ಯೆ ಬಾಧಕೋ ದ್ರವ್ಯ ಎಂಬ ಮಾತಿನಂತೆ ಸಾಧನೆ ಮಾಡಿದರಷ್ಟೆ ಪ್ರತಿಫಲ ದೊರಕುತ್ತದೆ. ಉನ್ನತ ಸಾಧನೆ ಮಾಡಿದ ಅಬ್ದುಲ್ ಕಲಾಂ, ಸುನೀತಾ ವಿಲಿಯಮ್ಸ್, ಕಲ್ಪನಾ ಚಾವ್ಲಾ ಮುಂತಾದವರು ಮಾದರಿಗಳಾಗಲಿ. ನೀವು ಸಾಧಕರಾಗಿ ಇತರರಿಗೆ ನೆರವಾಗಿ. ಪತ್ರಿಕೆಗಳನ್ನು, ಪುಸ್ತಕಗಳನ್ನು, ವಿಜ್ಞಾನದ ಲೇಖನಗಳನ್ನು ಓದಿ ಎಂದು ಹೇಳಿದರು.
ವಿದ್ಯಾರ್ಥಿಗಳು ವೈದ್ಯರಾಗಲು, ಎಂಜಿನಿಯರಾಗಲು ಏನು ಓದಬೇಕು. ಕೆಲಸ ಸಿಗಲು ಯಾವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬೇಕೆಂದು ಕೇಳಿ ತಿಳಿದುಕೊಂಡರು.
ನಿವೃತ್ತ ಶಿಕ್ಷಕ ಸುಂದರನ್, ಭಾಷೆಯ ಬಗ್ಗೆ, ಸರ್ಕಾರಿ ಶಾಲೆಯಲ್ಲಿ ಕಲಿತು ಸಾಧಕರಾದವರ ಉದಾಹರಣೆಗಳನ್ನು ಕೊಟ್ಟು ಮಕ್ಕಳನ್ನು ಹುರಿದುಂಬಿಸಿದರು. ನಿವೃತ್ತ ಶಿಕ್ಷಕಿ ರಮಾ ಮಕ್ಕಳಿಗೆ ಶಿಶುಗೀತೆಯನ್ನು ಹೇಳಿಕೊಟ್ಟರು.
ಮುಖ್ಯ ಶಿಕ್ಷಕ ವಿ.ಎನ್.ಗೋಪಾಲಕೃಷ್ಣ, ಶಿಕ್ಷಕರಾದ ನಾಗಭೂಷಣ್, ಎಂ.ಎ.ರಾಮಕೃಷ್ಣ, ಗಂಗಶಿವಪ್ಪ ಹಾಜರಿದ್ದರು.