Home News ವಿಶ್ವ ತಂಬಾಕು ನಿಷೇಧ ದಿನಾಚರಣೆ

ವಿಶ್ವ ತಂಬಾಕು ನಿಷೇಧ ದಿನಾಚರಣೆ

0

ಸಾರ್ವಜನಿಕ ಸ್ಥಳಗಳಲ್ಲಿ ಬೀಡಿ, ಸಿಗರೇಟು ಸೇದುವವರು. ತಂಬಾಕು, ಗುಟಕಾ ಉಗಿಯುವವರ ವಿರುದ್ಧ ಗಟ್ಟಿಯಾದ ಧ್ವನಿ ಎತ್ತುವ ಮನೋಭಾವವನ್ನು ಶ್ರೀಸಾಮಾನ್ಯರು ಬೆಳೆಸಿಕೊಳ್ಳಬೇಕು. ಅಂತಹ ನ್ಯಾಯಯುತ ಬೇಡಿಕೆಗಳಿಗೆ ಕಾನೂನು ಬೆಂಗಾವಲಾಗಿರುತ್ತದೆ ಎಂದು ಜೆಎಂಎಫ್‌ಸಿ ಮತ್ತು ಸಿವಿಲ್‌ ನ್ಯಾಯಾಧಿಶರಾದ ಟಿ.ಎಲ್‌.ಸಂದೀಶ್‌ ತಿಳಿಸಿದರು.
ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ‘ವಿಶ್ವ ತಂಬಾಕು ನಿಷೇಧ ದಿನಾಚರಣೆ’ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಂಬಾಕು ಸೇವನೆಯಿಂದ ಕ್ಯಾನ್ಸರ್‌, ಕ್ಷಯರೋಗ, ಎಚ್‌ಐವಿ. ಸೇರಿದಂತೆ ಮುಂತಾದ ಅಪಾಯಕಾರಿ ಕಾಯಿಲೆಗಳು ಬರುತ್ತವೆ. ತಂಬಾಕು ಮುಕ್ತ ದೇಶವನ್ನಾಗಿಸಲು ಪ್ರತಿಯೊಬ್ಬರು ಶ್ರಮಿಸಬೇಕು. ತಂಬಾಕು ಸೇವನೆಯಿಂದ ಜನರು ಭಯಾಕನ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮೇ 31 ಅನ್ನು ವಿಶ್ವ ತಂಬಾಕು ಸೇವನೆ ನಿಷೇಧ ದಿನವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಕಾನೂನು ಬಾಹಿರವಾಗಿ ತಂಬಾಕು ಮಾರಾಟ ಮಾಡುವವರ ಮೇಲೆ ತಂಬಾಕು ನಿಯಂತ್ರಣ ಘಟಕವು ದಾಳಿ ನಡೆಸುವಂತಾಗಬೇಕು. ಸಾರ್ವಜನಿಕ ಸ್ಥಳದಲ್ಲಿ ಎಲ್ಲರಿಗೂ ಕಾಣುವ ಹಾಗೆ `ಧೂಮಪಾನ ನಿಷೇಧಿಸಲಾಗಿದೆ~ ಎನ್ನುವುದನ್ನು ಬರೆಯಬೇಕು. ತಂಬಾಕು ಸೇವನೆ ಮುಕ್ತ ಜಿಲ್ಲೆ, ತಾಲ್ಲೂಕು ನಿರ್ಮಿಸಲು ರಾಜ್ಯ ತಂಬಾಕು ನಿಯಂತ್ರಣ ಘಟಕವು ಕೆಲಸ ಮಾಡಬೇಕು ಎಂದು ಹೇಳಿದರು.
ತಾಲ್ಲೂಕು ವೈದ್ಯಾಧಿಕಾರಿ ಅನಿಲ್‌ಕುಮಾರ್‌, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ, ಕಾರ್ಯದರ್ಶಿ ಎಂ.ಬಿ.ಲೋಕೇಶ್‌, ಆಡಳಿತ ವೈದ್ಯಾಧಿಕಾರಿ ಡಾ.ವಾಣಿ, ಡಾ.ವಿಜಯ್‌ಕುಮಾರ್‌, ಡಾ.ಸಮೀವುಲ್ಲ ಹಾಜರಿದ್ದರು.