ನಗರದ ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಉಲ್ಲೂರುಪೇಟೆ ಕ್ಲಸ್ಟರ್ ಮಟ್ಟದ ಮಕ್ಕಳ ವಿಜ್ಞಾನ ಹಬ್ಬವನ್ನು ಉದ್ಘಾಟಿಸಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆಂಜನೇಯಲು ಮಾತನಾಡಿದರು.
ಮಕ್ಕಳಲ್ಲಿ ಸ್ವಕಲಿಕೆ, ವೈಜ್ಞಾನಿಕ ಪ್ರಜ್ಞೆ ಹಾಗೂ ಪ್ರಶ್ನಿಸುವ ಮನೋಭಾವ ಬೆಳೆಸುವ ಉದ್ದೇಶದಿಂದ ಮಕ್ಕಳ ವಿಜ್ಞಾನ ಹಬ್ಬವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಚಟುವಟಿಕೆ ಆಧಾರಿತ ಕಲಿಕೆಯಿಂದ ಮಕ್ಕಳಲ್ಲಿ ಕೌಶಲ್ಯಾಭಿವೃದ್ಧಿ ಬೆಳೆಸಲು ಸಾಧ್ಯ. ಮಗು ತನ್ನ ಬಾಲ್ಯವನ್ನು ಸಂಭ್ರಮಿಸಬೇಕೆಂದರೆ ಕಲಿಕೆಯು ಹಬ್ಬವಾಗಬೇಕು. ಮಕ್ಕಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಮುನ್ನಡೆಯ ಬೇಕಾದರೆ ವಿಜ್ಞಾನ ಅವಶ್ಯಕ. ಮಕ್ಕಳಲ್ಲಿ ಇರುವ ಪ್ರತಿಭೆ ಗುರುತಿಸಲು ಮಕ್ಕಳ ವಿಜ್ಞಾನ ಹಬ್ಬದಿಂದ ಸಾಧ್ಯ ಎಂದರು.
ಬಿ.ಆರ್.ಸಿ.ಸಂಯೋಜಕ ತ್ಯಾಗರಾಜ್ ಮಾತನಾಡಿ, ವಿಜ್ಞಾನವಿಲ್ಲದೇ ಬದುಕು ನಡೆಸಲು ಸಾಧ್ಯವೇ ಇಲ್ಲ. ಶಿಕ್ಷಣದಲ್ಲಿಹೊಸ ಸಂಚಲನ ಮೂಡಿಸುವಲ್ಲಿಮಕ್ಕಳ ವಿಜ್ಞಾನ ಹಬ್ಬ ಸ್ಪೂರ್ತಿದಾಯಕವಾಗಿದೆ. ಮಕ್ಕಳು ಇದರ ಸದುಪಯೋಗ ಪಡೆದು ಶೈಕ್ಷಣಿಕವಾಗಿ ಮುಂದುವರಿಬೇಕು ಎಂದರು.
ಸಿ.ಆರ್.ಪಿ.ಪ್ರಕಾಶ್ ಮಾತನಾಡಿ, ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಉಲ್ಲೂರುಪೇಟೆ, ಗಂಜಿಗುಂಟೆ ಮತ್ತು ಬಶೆಟ್ಟಹಳ್ಳಿ ಮೂರು ಕ್ಲಸ್ಟರ್ ಗಳಲ್ಲಿ ಈ ದಿನ ವಿಜ್ಞಾನ ಹಬ್ಬವನ್ನು ನಡೆಸಲಾಗುತ್ತಿದೆ. ಎರಡು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ೬, ೭ ಮತ್ತು ೮ ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಜ್ಞಾನದ ಪ್ರಯೋಗ, ಕರಕುಶಲ ಪ್ರಯೋಗ ಮತ್ತು ಆಟೋಟಗಳನ್ನು ನಡೆಸಲಾಗುತ್ತದೆ. ಉಲ್ಲೂರುಪೇಟೆ ಕ್ಲಸ್ಟರಿನ ಎಂಟು ಶಾಲೆಗಳಿಂದ ೧೨೦ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಪ್ರತೀ ಕ್ಲಸ್ಟರಿನಿಂದ ನಾಲ್ವರು ಗಂಡು ಮತ್ತು ನಾಲ್ವರು ಹೆಣ್ಣುಮಕ್ಕಳನ್ನು ಆರಿಸಿ ಜಿಲ್ಲಾಮಟ್ಟದ ವಿಜ್ಞಾನ ಹಬ್ಬಕ್ಕೆ ಕಳುಹಿಸಿಕೊಡಲಾಗುವುದು. ಆತಿಥ್ಯ ಅತಿಥೇಯ ಎಂಬ ಪರಿಕಲ್ಪನೆಯಲ್ಲಿ ಇಲ್ಲಿಂದ ಹೋದ ಮಕ್ಕಳು ಅಲ್ಲಿನ ಮಕ್ಕಳ ಮನೆಗಳ ಮನೆಯಲ್ಲಿ ಉಳಿಯುತ್ತಾರೆ ಎಂದು ವಿವರಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎನ್.ಮುನಿರಾಜು, ಎಸ್.ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ಗಜೇಂದ್ರ, ಪಿಳ್ಳಣ್ಣ, ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜುನಾಥ್, ಸಂಪನ್ಮೂಲ ಶಿಕ್ಷಕರಾದ ಎಂ.ಎ.ರಾಮಕೃಷ್ಣ, ರಮೇಶ್, ನಿರ್ಮಲ, ರಂಜಿತ, ಜಯಂತಿ, ಚಂದ್ರಕಲಾ ಹಾಜರಿದ್ದರು.