ತಾಲ್ಲೂಕಿನಾದ್ಯಂತ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಬುಧವಾರ ಪ್ರಾರಂಭಗೊಂಡವು. ಬೇಸಿಗೆ ರಜೆಯ ಮಜಾ ಅನುಭವಿಸಿದ್ದ ಮಕ್ಕಳು ಮತ್ತೆ ಶಾಲೆಗಳತ್ತ ಹೆಜ್ಜೆ ಹಾಕಿದರು. ಸರ್ಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸಲು ಹಲವು ರೀತಿಯ ಕಾರ್ಯಕ್ರಮಗಳನ್ನು ಶಾಲೆಯ ಮೊದಲ ದಿನದಂದು ಹಮ್ಮಿಕೊಳ್ಳಲಾಗಿತ್ತು. ಅಪ್ಪೇಗೌಡನಹಳ್ಳಿಯಲ್ಲಿ ಶಾಲೆಗೆ ಮಗಳನ್ನು ಕರೆತರುತ್ತಿರುವ ತಾಯಿ ಒಂದನೇ ತರಗತಿಗೆ ಸೇರಿಸಿಕೊಳ್ಳಲು ಶಿಕ್ಷಕರು ಮನೆಗಳಿಗೆ ಭೇಟಿ ನೀಡಿ ಪೋಷಕರಿಗೆ ಮನವೊಲಿಸಿ ಮಕ್ಕಳಿಗೆ ಸಿಹಿ ನೀಡಿ ಕೆಲವೆಡೆ ಕರೆತಂದರು. ಕೆಲವು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಚಾಕೊಲೇಟ್ ನೀಡಿದರೆ, ಕೆಲವೆಡೆ ಬಿಸಿಯೂಟಕ್ಕೆ ಪಾಯಸ ಮಾಡಲಾಗಿತ್ತು. ಹಲವು ಶಾಲೆಗಳಿಂದ ಗ್ರಾಮಗಳಲ್ಲಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವಂತೆ ಜಾಥಾ ನಡೆಸಿದರು.
ಕೆಲವೆಡೆ ಮಕ್ಕಳಿಗೆ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹೂಗುಚ್ಛ ನೀಡಿ ವಿಶಿಷ್ಟವಾಗಿ ಬರಮಾಡಿಕೊಂಡರೆ, ಕೆಲವೆಡೆ ಲಾಲಿಪಪ್ ಅಥವಾ ಚಾಕೊಲೇಟ್ ನೀಡಿ ಮಕ್ಕಳನ್ನು ಸ್ವಾಗತಿಸಲಾಯಿತು. ಮಕ್ಕಳಿಗೆ ಹಲವೆಡೆ ಮೊದಲ ದಿನವೇ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ಶಿಡ್ಲಘಟ್ಟ ಕೋಟೆ ಸರ್ಕಾರಿ ಬಾಲಕಿಯರ ಶಾಲೆಯ ಮಕ್ಕಳು ಮತ್ತು ಶಿಕ್ಷಕರು “ಆಂಗ್ಲ ಮಾಧ್ಯಮ” ಪ್ರಾರಂಭಿಸುತ್ತಿರುವುದಾಗಿ ಜಾಥಾ ನಡೆಸಿದರು “ಮಕ್ಕಳು ಶಾಲೆಗೆ ಇಷ್ಟಪಟ್ಟು ಬರಬೇಕು. ಆಗ ಅವರ ಕಲಿಕೆ ಚೆನ್ನಾಗಿ ಸಾಗುತ್ತದೆ. ಆಡುತ್ತಾ ನಲಿಯುತ್ತಾ ಸಂತಸದಿಂದ ಅವರ ಕಲಿಕೆ ಆಗಬೇಕು ಎಂಬ ಉದ್ದೇಶದಿಂದ ಮಕ್ಕಳಿಗೆ ಈ ದಿನ ಸಿಹಿ ನೀಡಿ ಸ್ವಾಗತಿಸಿದೆವು. ಅಂಗನವಾಡಿ ಪೂರೈಸಿರುವ ಮಕ್ಕಳ ಪೋಷಕರೊಂದಿಗೆ ಮಾತನಾಡಿ ಅವರ ಮನೆಗಳಿಗೇ ಹೋಗಿ ಮಕ್ಕಳನ್ನು ಶಾಲೆಗೆ ದಾಖಲಿಸಿ ಕರೆತಂದೆವು” ಎಂದು ಅಪ್ಪೇಗೌಡನಹಳ್ಳಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ ತಿಳಿಸಿದರು.