ವ್ಯಕ್ತಿಗತವಾಗಿ ಹೇಳಿಕೆಗಳನ್ನು ನೀಡುವುದು ಶಾಸಕರಿಗೆ ತರವಲ್ಲ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವ ಕೀಳು ಪ್ರವೃತ್ತಿ ತಮ್ಮದಲ್ಲ ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ಬುಧವಾರ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಯಾಚಿಸುವ ಸಂದರ್ಭದಲ್ಲಿ ಸುದ್ಧಿಗಾರರೊಂದಿಗೆ ಅವರು ಮಾತನಾಡಿ, ಈಚೆಗೆ ಶಾಸಕ ಎಂ.ರಾಜಣ್ಣ ಪತ್ರಿಕಾ ಹೇಳಿಕೆಯಲ್ಲಿ ತಮ್ಮ ಮೇಲೆ ಆರೋಪ ಮಾಡಿರುವುದಕ್ಕೆ ಉತ್ತರ ನೀಡಿದರು.
ಮಾಜಿ ಶಾಸಕರಾದ ದಿವಂಗತ ಎಸ್.ಮುನಿಶಾಮಪ್ಪನವರೂ ರಾಜಕೀಯ ಮಾಡುತ್ತಿದ್ದರು, ಅವರೆಂದೂ ವ್ಯಕ್ತಿಗತವಾಗಿ ಕೀಳುಮಟ್ಟದ ರಾಜಕಾರಣ ಮಾಡಿರಲಿಲ್ಲ, ಅಭಿವೃದ್ಧಿಯ ವಿಚಾರದಲ್ಲಿ ಮಾತ್ರ ಮಾತನಾಡುತ್ತಿದ್ದರು, ಈ ಚುನಾವಣೆಯಲ್ಲಿ ಜನ ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಅವಿಭಾಜ್ಯ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಸುಮಾರು ೧,೦೨೪ ಕೆರೆಗಳ ಹೂಳು ತೆಗೆದು ಅಂತರ್ಜಲದ ಮಟ್ಟವನ್ನು ವೃದ್ಧಿ ಮಾಡಲು ಸರ್ಕಾರದಿಂದ ಅನುದಾನವನ್ನು ಬಿಡುಗಡೆ ಮಾಡಿಸಿ, ಹಲವಾರು ಕೆರೆಗಳನ್ನು ಅಭಿವೃದ್ಧಿ ಮಾಡಿಸಿದ್ದೇನೆ. ಶಿಡ್ಲಘಟ್ಟದಲ್ಲಿ ಅಗ್ನಿಶಾಮಕ ಠಾಣೆಯನ್ನು ಮಾಡಲು ಮುಂದಾಗಿದ್ದೇ ನಮ್ಮ ಅವಧಿಯಲ್ಲಿ.ಬಸ್ಡಿಪೋ ನಿರ್ಮಾಣಕ್ಕಾಗಿ ಪ್ರಯತ್ನ ಮಾಡಿದ್ದು, ಹಿತ್ತಲಹಳ್ಳಿ ಬಳಿಯಲ್ಲಿ ಜಮೀನು ಗುರ್ತಿಸುತ್ತಿದ್ದೆವು. ಅಷ್ಟರಲ್ಲಿ ಚುನಾವಣೆಗಳು ಬಂದಿತ್ತು, ಹನುಮಂತಪುರದ ಬಳಿಯಲ್ಲಿ ಗುರ್ತಿಸಿರುವ ಜಮೀನು ಖಾಸಗಿ ವ್ಯಕ್ತಿಗಳದ್ದು, ಅದು ಸರ್ಕಾರದ್ದಲ್ಲ, ಆದ್ದರಿಂದ ಅಲ್ಲಿ ಡಿಪೋ ಕಾಮಗಾರಿ ಪ್ರಾರಂಭವಾಗಲಿಲ್ಲ ಎಂದರು.
ಸಂಸದ ಕೆ.ಎಚ್.ಮುನಿಯಪ್ಪ, ನಾನು ಬಾಲ್ಯಸ್ನೇಹಿತರು, ರಾಜಕೀಯವಾಗಿಯೂ ಒಗ್ಗಟ್ಟಾಗಿ ಚುನಾವಣೆಗಳನ್ನು ನಡೆಸಿದವರು, ರಾಜಕೀಯದಲ್ಲಿ ಭಿನ್ನಾಭಿಪ್ರಾಯ ಬರುವುದು ಸಹಜ, ಈಗ ಒಗ್ಗಟ್ಟಾಗಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಮುತ್ತೂರು ಗ್ರಾಮದ ರಾಮರೆಡ್ಡಿ ಮತ್ತು ಜಯಚಂದ್ರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಮುಖಂಡರಾದ ಮುತ್ತೂರು ಚಂದ್ರೇಗೌಡ, ವೆಂಕಟೇಶಪ್ಪ, ಮುನಿಯಪ್ಪ, ಮಳ್ಳೂರು ನಾಗರಾಜ್, ವೆಂಕಟರಾಜೇಗೌಡ, ಗಿರೀಶ್, ಶ್ರೀಧರ್, ಪಿ.ನಿರ್ಮಲಾ ಮುನಿರಾಜು, ಶಿವಾನಂದ, ಜಿ.ಕೆ.ಶಿವಾನಂದ, ರಾಮಪ್ಪ, ವೇಣುಗೋಪಾಲ್ ಮತ್ತಿತರರು ಹಾಜರಿದ್ದರು.