Home News ಶಿಕ್ಷಕರು ವಿದ್ಯೆ ಧಾರೆಯೆರೆಯಬೇಕು

ಶಿಕ್ಷಕರು ವಿದ್ಯೆ ಧಾರೆಯೆರೆಯಬೇಕು

0

ಪ್ರತಿಯೊಬ್ಬ ಶಿಕ್ಷಕರು, ತಮ್ಮ ಬಳಿಯಲ್ಲಿ ವಿದ್ಯೆ ಕಲಿಯುವಂತಹ ಮಕ್ಕಳಿಗೆ ಸರ್ವಸ್ವವನ್ನೂ ಧಾರೆಯೆರೆಯಬೇಕು ಎಂದು ಸೇವೆಯಿಂದ ನಿವೃತ್ತಿ ಹೊಂದಿದ ಶಿಕ್ಷಕ ಶ್ಯಾಂಸುಂದರ್ ಹೇಳಿದರು.
ನಗರದ ಸರಸ್ವತಿ ಕಾನ್ವೆಂಟ್ ಅನುದಾನಿತ ಶಾಲೆಯಲ್ಲಿ ಕಳೆದ ೩೦ ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿದ್ದ ಅವರು ನಿವೃತ್ತಿ ಹೊಂದಿದ ಕಾರಣ, ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರಿ ಸೇವೆಯಲ್ಲಿ ನಿವೃತ್ತಿ ಎಂಬುದು ಸಹಜ ಪ್ರಕ್ರಿಯೆಯಾಗಿದ್ದು, ನಿವೃತ್ತಿ ಹೊಂದುವವರೆಗೂ ಮಾಡಿರುವ ಸೇವೆಯು ಜೀವನ ಪೂರ್ತಿ ಉತ್ತಮವಾದ ಅನುಭವಗಳನ್ನು ಕೊಡುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರು ತಮ್ಮ ವೃತ್ತಿಜೀವನದಲ್ಲಿ ಸಾರ್ಥಕತೆಯನ್ನು ಮೈಗೂಡಿಸಿಕೊಳ್ಳಬೇಕು. ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸುವವರು ಬಹಳಷ್ಟು ಜಾಗ್ರತೆಯಿಂದ ಕೆಲಸ ಮಾಡಬೇಕು, ಒಬ್ಬ ಶಿಕ್ಷಕ ಮೈ ಮರೆತರೆ ಇಡೀ ಸಮಾಜವೇ ತಪ್ಪುದಾರಿ ಹಿಡಿಯುತ್ತದೆ. ಆದ್ದರಿಂದ ಉತ್ತಮವಾದ ಪ್ರಜೆಗಳನ್ನು ಸಮಾಜಕ್ಕೆ ಕೊಡುಗೆ ನೀಡುವಂತಹ ಹೊಣೆಗಾರಿಕೆ ಇದೆ. ಪ್ರಜ್ಞಾವಂತ ನಾಗರಿಕರನ್ನಾಗಿ ಮಕ್ಕಳನ್ನು ತಯಾರು ಮಾಡಬೇಕು, ಆಗ ಮಾತ್ರ ವೃತ್ತಿ ಜೀವನ ಸಾರ್ಥಕವಾಗುತ್ತದೆ ಎಂದರು.
ಕ.ಸಾ.ಪ ತಾಲ್ಲೂಕು ಅಧ್ಯಕ್ಷ ಬಿ.ಆರ್. ಅನಂತಕೃಷ್ಣ ಮಾತನಾಡಿ, ಗುರುಗಳು ಸಮಾಜಕ್ಕೆ ಮರ್ಗದರ್ಶಕರಾಗಿದ್ದು, ಅವರ ಮಾರ್ಗದರ್ಶನವನ್ನು ಪಡೆದು ಮಕ್ಕಳು ಉತ್ತಮವಾದ ಪ್ರಜೆಗಳಾಗಬೇಕು. ಪಿಟೀಲು ವಿದ್ವಾಂಸರಾದ ಶಿಕ್ಷಕ ಶ್ಯಾಂಸುಂದರ್ ಅವರು ನಿವೃತ್ತಿ ಜೀವನವನ್ನು ಪಿಟೀಲು ಕಲಿಸಲು ಹಾಗೂ ಕಲಾ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಇನ್ನಷ್ಟು ಶಿಷ್ಯರನ್ನು ತಾಲ್ಲೂಕಿಗೆ ಕೊಡುಗೆಯಾಗಿ ನೀಡುವಂತಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಶಾಲಾ ಮಕ್ಕಳು ನಿವೃತ್ತ ಶಿಕ್ಷಕ ಶ್ಯಾಂಸುಂದರ್ ಅವರನ್ನು ಆತ್ಮೀಯವಾಗಿ ಅಭಿನಂದಿಸಿದರು. ನಿವೃತ್ತ ಶಿಕ್ಷಕರ ಕುಟುಂಬ ವರ್ಗದವರು ಈ ಸಂದರ್ಭದಲ್ಲಿ ಹಾಜರಿದ್ದರು.