ಯುವಜನರು ತಮ್ಮ ದೈಹಿಕ ಸದೃಡತೆಗೆ ಹೆಚ್ಚಿನ ಆಧ್ಯತೆ ನೀಡದೆ ನಾನಾ ರೋಗ ರುಜುನಗಳಿಗೆ ಬಲಿಯಾಗುತ್ತಿದ್ದಾರೆ. ಈಗಿನ ಕಾಲಕ್ಕೆ ವ್ಯಾಯಾಮಶಾಲೆಗಳು ಪ್ರಸ್ತುತವಾಗಿವೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ತಿಳಿಸಿದರು.
ನಗರದ ಸಂತೆ ಮೈದಾನದ ಬಳಿ ಕೋಹಿನೂರ್ ವೆಲ್‌ಫೇರ್ ಟ್ರಸ್ಟ್‌ನಿಂದ ಟಿಪ್ಪು ಸುಲ್ತಾನ್ ಗರಡಿ ಮನೆಯನ್ನು ಆರಂಭಿಸಿದ್ದು, ಗರಡಿ ಮನೆಯಲ್ಲಿ ಪೂಜೆ ಸಲ್ಲಿಸುವ ಮೂಲಕ ಅಧಿಕೃತವಾಗಿ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಕಂಪ್ಯೂಟರ್, ಫೇಸ್ ಬುಕ್, ವಾಟ್ಸ್‌ಪ್‌ನಂತ ಸಾಮಾಜಿಕ ಜಾಲ ತಾಣಗಳಲ್ಲಿ ಹೆಚ್ಚು ಹೆಚ್ಚು ಸಕ್ರಿಯರಾಗುವ ಮೂಲಕ ಇತರೆ ಚಟುವಟಿಕೆಗಳಿಗೆ ಹೆಚ್ಚು ಆಧ್ಯತೆ ನೀಡುತ್ತಿಲ್ಲ. ಇದರಿಂದ ಆರೋಗ್ಯ ಮಟ್ಟ ಕ್ಷೀಣಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಹಿಂದೆ ರಾಜ ಮಹರಾಜರ ಕಾಲದಿಂದಲೂ ಕುಸ್ತಿ, ಗರಡಿ ಮನೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಕುಸ್ತಿ ಪಟುಗಳು ನಮ್ಮ ಪ್ರತಿಷ್ಠೆ ಹೆಮ್ಮೆಯ ಪ್ರಶ್ನೆಯಾಗಿತ್ತು. ಆದರೆ ಕಾಲ ಬದಲಾದಂತೆ ಕುಸ್ತಿ, ಗರಡಿ ಮನೆಗಳು ಖಾಲಿಯಾಗಿವೆಯಲ್ಲದೆ ಕುಸ್ತಿ ಪಟುಗಳು ಸಹ ವಿರಳವಾಗಿದ್ದಾರೆ ಎಂದರು.
ಇಂತಹ ಪರಿಸ್ಥಿತಿಯಲ್ಲಿ ಕೋಹಿನೂರ್ ವೆಲ್‌ಫೇರ್ ಟ್ರಸ್ಟ್‌ನವರು ಗರಡಿ ಮನೆಯನ್ನು ನಿರ್ಮಿಸಿರುವುದು ಮೆಚ್ಚುವಂತ ಕಾರ್ಯ, ಇದರಿಂದ ಯುವಜನರು ತಮ್ಮ ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನಂದಮುನಿಕೃಷ್ಣಪ್ಪ, ಫೈಲ್ವಾನ್ ಉಮಾಯನ್ ಖಾನ್, ಕೋಹಿನೂರ್ ಟ್ರಸ್ಟ್‌ನ ಅಮ್ಜದ್ ನವಾಜ್, ಸಯ್ಯದ್ ಹುಸೇನ್, ಮಹಬೂಬ್ ಪಾಷ ಮತ್ತಿತರರು ಹಾಜರಿದ್ದರು.