ಜನವರಿ ೧ ರಂದು ಆತ್ಮಗೌರವ ಮತ್ತು ದಾಸ್ಯದ ವಿಮೋಚನೆಗಾಗಿ ಈ ದೇಶದ ಶೋಷಿತ ವರ್ಗದ ಸೈನಿಕರ ಗುಂಪೊಂದು ದನಿಯೆತ್ತಿದ ದಿನವಾಗಿದ್ದು, ಅಸೃಶ್ಯತೆಯ ವಿರುದ್ಧ ಕಾದಾಡಿ ಗೆದ್ದು ದೇಶದ ಚರಿತ್ರೆಯಲ್ಲಿ ಹೊಸ ಅಧ್ಯಾಯವನ್ನು ಬರೆದ ದಿನವಾಗಿ ಪ್ರತಿಯೊಬ್ಬರು ಸ್ಮರಿಸಿಕೊಳ್ಳಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಪ್ರವಾಸಿಮಂದಿರದ ಆವರಣದಿಂದ ಶನಿವಾರ ಮಹಾರಾಷ್ಟ್ರದ ಕೋರೆಗಾಂವ್ಗೆ ತೆರಳಿದ ದಲಿತ ಮುಖಂಡರಿಗೆ ಶಾಸಕ ಎಂ.ರಾಜಣ್ಣ ಶುಭಹಾರೈಸಿ ಅವರು ಮಾತನಾಡಿದರು.
ಜನವರಿ ೧ ಜಗತ್ತಿಗೆ ಹೊಸವರ್ಷದ ಸಂಭ್ರಮದ ದಿನವಾದರೂ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರತಿವರ್ಷ ಜನವರಿ ೧ ರಂದು ಭೇಟಿ ನೀಡುತ್ತಿದ್ದ ಕೊರೆಗಾಂವ್ನ ಚರಿತ್ರೆಯನ್ನು ನೆನೆಸಿಕೊಂಡು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾಗಿದೆ.
ಅಸೃಶ್ಯತೆಯ ವಿರುದ್ಧ ಬಂಡೆದಿದ್ದ ಶೋಷಿತ ಗುಂಪೊಂದು ಮಹಾರಾಷ್ಟ್ರದ ಪೇಶ್ವೆಗಳ ವಿರುದ್ಧ ಜಯಸಾಧಿಸಿದ ಈ ದಿನ, ಶೋಷಿತರ ಆತ್ಮಗೌರವ ತಲೆಯೆತ್ತಿದ ದಿನವೆಂದೇ ಪ್ರಸಿದ್ಧವಾಗಿದೆ. ಈ ಘಟನೆ ಅಂಬೇಡ್ಕರ್ ಅವರ ಹೋರಾಟದ ಬದುಕಿನ ಪ್ರೇರಣೆಗಳಲ್ಲಿ ಒಂದಾಗಿದ್ದು, ಕೋರೆಗಾಂವ್ಗೆ ತೆರಳುವಂತಹ ಪ್ರತಿಯೊಬ್ಬರು ಅಲ್ಲಿನ ಚರಿತ್ರೆಯನ್ನು ಉಳಿದೆಲ್ಲರಿಗೂ ಸಾರಿಹೇಳಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ಮಾತನಾಡಿ, ದಲಿತರು ಒಟ್ಟುಗೂಡಬೇಕು. ಸಂಘಟಿತರಾಗಿ ಹೋರಾಟ ನಡೆಸಬೇಕು. ಹೋರಾಟದ ಗುರ್ತಾಗಿ ಉಳಿದುಕೊಂಡಿರುವ ಕೋರೆಗಾಂವ್ ಚಳುವಳಿಯ ಹಿನ್ನೆಲೆಯನ್ನು ಪ್ರತಿಯೊಬ್ಬ ನಾಗರಿಕರು ತಿಳಿದುಕೊಳ್ಳಬೇಕು. ಪ್ರತಿ ವರ್ಷದ ಜನವರಿ ೧ ರಂದು ಅಲ್ಲಿಗೆ ಭೇಟಿ ನೀಡಬೇಕು ಎನ್ನುವ ಉದ್ದೇಶದಿಂದ ದಲಿತ ಮುಖಂಡರಿಗೆ ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಗಂಜಿಗುಂಟೆ ನರಸಿಂಹಮೂರ್ತಿ ಮಾತನಾಡಿ, ಚರಿತ್ರೆಯಲ್ಲಿ ಹೂತು ಹೋಗಿದ್ದ ಕೋರೆಗಾಂವ್ ಕದನದ ಅಪೂರ್ವ ಪ್ರಸಂಗವನ್ನು ಇತಿಹಾಸದ ಪುಟಗಳಿಂದ ಹೆಕ್ಕಿ ತೆಗೆದು ಜಗತ್ತಿಗೆ ತೋರಿಸಿದವರು ಬಿ.ಆರ್.ಅಂಬೇಡ್ಕರ್. ಹಾಗಾಗಿಯೇ ಜನವರಿ – ೧ ಅಸೃಶ್ಯತೆಯ ವಿರುದ್ಧ ಈ ದೇಶದ ಶೋಷಿತ ಜನಾಂಗಗಳ ಅಸಹನೆಯ ಕಟ್ಟೆಯೊಡೆದ ದಿನವಾಗಿಯೂ ಅವರು ತಮ್ಮ ಅಸ್ಥಿತ್ವದ ಉಳಿವಿಗಾಗಿ ಹೋರಾಡಿ ಜಯಿಸಿದ ಉತ್ಸವದ ದಿನವನ್ನಾಗಿ ಮಾಡಬೇಕಾಗಿದೆ. ಪ್ರತಿಯೊಬ್ಬ ವಿದ್ಯಾವಂತರು ಈ ಘಟನೆಯ ಬಗ್ಗೆ ತಿಳಿಯಬೇಕು. ತಾವು ತಿಳಿದುಕೊಂಡದ್ದನ್ನು ಇತರರಿಗೂ ಸಾರಿ ಹೇಳಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಬಶೆಟ್ಟಿಹಳ್ಳಿ ದ್ಯಾವಪ್ಪ, ಈ ಧರೆ ಪ್ರಕಾಶ್, ತೇಕಹಳ್ಳಿ ದ್ಯಾವಪ್ಪ, ಗಂಗಪ್ಪ, ಆಂಜಿನಪ್ಪ, ಕೆ.ಎಸ್.ದ್ಯಾವಕೃಷ್ಣಪ್ಪ, ರೆಡ್ಡಿ, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.