ತಾಲ್ಲೂಕಿನ ಆನೆಮಡಗು ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ಕಸಾಪ ವತಿಯಿಂದ ನಡೆಸಿದ “ಕರ್ನಾಟಕ ಏಕೀಕರಣ ಇತಿಹಾಸ” ಕುರಿತಾದ ಕಾರ್ಯಕ್ರಮದಲ್ಲಿ
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ಭಾಷೆ ಆಧಾರಿತ ಭಾರತದ ರಾಜ್ಯಗಳ ಸ್ಥಾಪನೆಯ ಕಾಲದಲ್ಲಿ ಕನ್ನಡ ಭಾಷೆ ಮಾತನಾಡುವವರು ಹೆಚ್ಚಾಗಿದ್ದ ನಾಲ್ಕು ಭಾಗಗಳನ್ನು ಮೈಸೂರು ಸಂಸ್ಥಾನದೊಂದಿಗೆ ವಿಲೀನಗೊಳಿಸಿದ ಪ್ರಕ್ರಿಯೆಯೆ ೧೯೫೬ ರಲ್ಲಿ ಆದ ಕರ್ನಾಟಕದ ಏಕೀಕರಣ ಎಂದು ಅವರು ತಿಳಿಸಿದರು.
ಕರ್ನಾಟಕ ಏಕೀಕರಣಕ್ಕೆ ದುಡಿದು, ಏಕೀಕರಣ ಆದದ್ದನ್ನು ನೋಡಿ ಸಂತೋಷಪಟ್ಟ ಹಿರಿಯರಾದ ಆಲೂರು ವೆಂಕಟರಾಯರನ್ನು ‘ಕನ್ನಡ ಕುಲಪುರೋಹಿತ’ ಎಂದೇ ಕರೆಯಲಾಗಿದೆ. ಕನ್ನಡ ಮತ್ತು ಕರ್ನಾಟಕದ ಬಗ್ಗೆ ಆಲೂರರಿಗೆ ಇದ್ದ ಗೌರವ, ಅಭಿಮಾನ ಮತ್ತು ಕಳಕಳಿಗಳನ್ನು ಅವರ ‘ಕರ್ನಾಟಕ ಗತ ವೈಭವ’ ಕೃತಿಯಲ್ಲಿ ಗುರುತಿಸಬಹುದು. ೧೯೫೬ರ ನವೆಂಬರ್ ಒಂದನೆಯ ತಾರೀಕು ಬೆಳಗ್ಗೆ ನಡೆದ ಸಮಾರಂಭದಲ್ಲಿ ‘ವಿಶಾಲ ಮೈಸೂರು’ ರಾಜ್ಯವನ್ನು ರಾಷ್ಟ್ರಪತಿ ಬಾಬೂ ರಾಜೇಂದ್ರ ಪ್ರಸಾದ್ ಉದ್ಘಾಟಿಸಿದರು. ಅಂದೇ ಹೊಸ ರಾಜ್ಯದ ರಾಜ್ಯಪಾಲರಾಗಿ ಜಯಚಾಮರಾಜ ಒಡೆಯರ್ ಮತ್ತು ಮುಖ್ಯಮಂತ್ರಿಯಾಗಿ ಎಸ್.ನಿಜಲಿಂಗಪ್ಪ ಅವರು ಅಧಿಕಾರ ಸ್ವೀಕರಿಸಿದರು. ಅದೇ ದಿನ ಹಂಪೆಯಲ್ಲಿ ವಿರೂಪಾಕ್ಷನ ಸನ್ನಿಧಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಕರ್ನಾಟಕ ಕುಲ ಪುರೋಹಿತರೆನಿಸಿ ಖ್ಯಾತರಾದ ಆಲೂರು ವೆಂಕಟರಾಯರ ನೇತೃತ್ವದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ‘ಕರ್ನಾಟಕ’ ವಾದ ‘ವಿಶಾಲ ಮೈಸೂರು’ ೧೯೭೩ರ ನವೆಂಬರ್ ಒಂದನೆಯ ತಾರೀಕು ರಾಜ್ಯದ ಹೆಸರು ‘ಕರ್ನಾಟಕ’ ಎಂದು ಬದಲಾಯಿತು ಎಂದು ವಿವರಿಸಿದರು.
ಶಿಕ್ಷಕ ಲಕ್ಷ್ಮೀಕಾಂತ್ ಮಾತನಾಡಿ, ನಾವು ಮಾತೃಭಾಷೆಯನ್ನು ಪ್ರೀತಿಸಬೇಕು, ಇತರ ಭಾಷೆಗಳನ್ನು ಗೌರವಿಸ ಬೇಕು. ಭಾಷೆ ಹಾಗೂ ದೇಶಾಭಿಮಾನ ವನ್ನು ಎಲ್ಲರೂ ಬೆಳೆಸಿಕೊಂಡು ಗಡಿನಾಡಿನಲ್ಲಿ ಕನ್ನಡ ಕಟ್ಟುವ ಕೆಲಸ ಮಾಡಬೇಕು. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗ್ರಾಮಾಂತರ ಪ್ರದೇಶದಲ್ಲಿ ಹಾಗೂ ಗಡಿ ಭಾಗಗಳಲ್ಲಿ ಹೆಚ್ಚೆಚ್ಚು ಕಾರ್ಯಕ್ರಮಗಳು ನಡೆಯಲಿ ಎಂದರು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಾದ ಸಿ.ಎಂ.ಅಂಬಿಕ, ಚಂದ್ರಶೇಖರ, ಜ್ಯೋತಿ, ಗಂಗೋತ್ರಿ, ಅಭಿಲಾಷ್ ಅವರನ್ನು ಕಸಾಪ ವತಿಯಿಂದ ಪ್ರಮಾಣಪತ್ರ ಮತ್ತು ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು.
ಮುಖ್ಯ ಶಿಕ್ಷಕ ಕೆ.ಆರ್.ಸುಧರ್ಮ, ಶಿಕ್ಷಕರಾದ ಇಮ್ರಾನ್, ಅಮರನಾಥ್, ನಾರಾಯಣಸ್ವಾಮಿ, ಹೇಮಲತಾ, ಸರೋಜ ಆರ್ ಜೋಗಳೇಕರ್, ರಾಮಮೂರ್ತಿ, ಲಕ್ಷ್ಮೀನಾರಾಯಣ್, ಪುಷ್ಪ, ಕೃಷ್ಣಮೂರ್ತಿ, ಪ್ರಕಾಶ್ ಬಾಬು, ಕಸಾಪ ತಾಲ್ಲೂಕು ಕಾರ್ಯದರ್ಶಿ ಸತೀಶ್, ಸಂಘಸಂಸ್ಥೆಗಳ ಪ್ರತಿನಿಧಿ ಶಂಕರ್, ಸದಸ್ಯ ಮೂರ್ತಿ, ಮಂಜುನಾಥ, ಹಳೇ ವಿದ್ಯಾರ್ಥಿಗಳ ಸಂಘದ ಸದಸ್ಯರು ಹಾಜರಿದ್ದರು.