Home News ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಬಂದ್ ಯಶಸ್ವಿ

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಬಂದ್ ಯಶಸ್ವಿ

0

ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಬಂದ್ಗೆ ಶುಕ್ರವಾರ ತಾಲ್ಲೂಕಿನಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ರೇಷ್ಮೆ ಗೂಡಿನ ಮಾರುಕಟ್ಟೆ, ತಾಲ್ಲೂಕು ಕಚೇರಿ, ಬಸ್ ನಿಲ್ದಾಣ, ಬ್ಯಾಂಕ್, ಚಿತ್ರಮಂದಿರ, ಪೆಟ್ರೋಲ್ ಬಂಕ್, ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಬಂದ್ಗೆ ಸಹಕರಿಸಿದರು. ವಕೀಲರು ನ್ಯಾಯಾಲಯ ಕಲಾಪದಿಂದ ಹೊರಗುಳಿದು ಬಂದ್ಗೆ ಬೆಂಬಲಿಸಿದರು. ನಗರದ ರಸ್ತೆಗಳೆಲ್ಲ ಬಿಕೋ ಎನ್ನುತ್ತಿದ್ದವು.
ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣ, ಪ್ರವೀಣ್ ಶೆಟ್ಟಿ ಬಣ, ರೈತ ಸಂಘ ಹಾಗೂ ಹಸಿರುಸೇನೆಯ ಪುಟ್ಟಣ್ಣಯ್ಯ ಬಣ, ಕೋಡಿಹಳ್ಳಿ ಚಂದ್ರಶೇಖರ್ ಬಣ, ತಾಲ್ಲೂಕು ಬಿಜೆಪಿ ಘಟಕ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಲಯನ್ ಯುವಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಪಕ್ಷಾತೀತವಾಗಿ ಬೈಕ್ ರ್ಯಾಲಿ ನಡೆಸಿ ಘೋಷಣೆಗಳನ್ನು ಕೂಗಿದರು. ಮೆರವಣಿಗೆಯನ್ನು ನಡೆಸಿದ ವಿವಿಧ ಸಂಘಟನೆಗಳ ಸದಸ್ಯರು ತಹಶೀಲ್ದಾರ್ ಮನೋರಮಾ ಅವರಿಗೆ ಮನವಿಯನ್ನು ಸಲ್ಲಿಸಿದರು.

ಶಿಡ್ಲಘಟ್ಟದಲ್ಲಿ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುವುದನ್ನು ವಿರೋಧಿಸಿ ಶುಕ್ರವಾರ ಬಂದ್ ಆಚರಿಸಿದ ವಿವಿಧ ಸಂಘಟನೆಗಳ ಸದಸ್ಯರು ತಹಶೀಲ್ದಾರ್ ಮನೋರಮಾ ಅವರಿಗೆ ಮನವಿಯನ್ನು ಸಲ್ಲಿಸಿದರು.
ಶಿಡ್ಲಘಟ್ಟದಲ್ಲಿ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುವುದನ್ನು ವಿರೋಧಿಸಿ ಶುಕ್ರವಾರ ಬಂದ್ ಆಚರಿಸಿದ ವಿವಿಧ ಸಂಘಟನೆಗಳ ಸದಸ್ಯರು ತಹಶೀಲ್ದಾರ್ ಮನೋರಮಾ ಅವರಿಗೆ ಮನವಿಯನ್ನು ಸಲ್ಲಿಸಿದರು.

ಬಸ್ ನಿಲ್ದಾಣದ ಬಳಿ ಮಾನವ ಸರಪಣಿಯನ್ನು ನಿರ್ಮಿಸಿ ಪ್ರತಿಭಟಿಸಿದ ಪ್ರತಿಭಟನಾಕಾರರು ಜಯಲಲಿತಾ ಪ್ರತಿಕೃತಿಯನ್ನು ದಹನ ಮಾಡಿ ಘೋಷಣೆ ಕೂಗಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ನಾರಾಯಣಸ್ವಾಮಿ, ತಾದೂರು ಮಂಜುನಾಥ್, ವೇಣುಗೋಪಾಲ್, ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಪ್ರತೀಶ್, ಕನ್ನಡ ರಕ್ಷಣಾ ವೇದಿಕೆಯ(ಪ್ರವೀಣ್ ಶೆಟ್ಟಿ ಬಣ) ತಾಲ್ಲೂಕು ಅಧ್ಯಕ್ಷ ವಸಂತಕುಮಾರ್, ಮಂಜುನಾಥ್, ನಾರಾಯಣಸ್ವಾಮಿ, ರಾಜೇಶ್, ಸಯ್ಯದ್ ಬಾಬಾ, ಸೈಕಲ್ ಮಂಜುನಾಥ್, ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಸತೀಶ್, ರೂಪಸಿ ರಮೇಶ್, ವಿ.ಕೃಷ್ಣ, ಪುರುಷೋತ್ತಮ್, ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ)ದ ವೆಂಕಟರೋಣಪ್ಪ, ದೇವರಾಜ್, ಲಯನ್ಯುವಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಗೌರವಾಧ್ಯಕ್ಷ ಮುನಿರಾಜು, ಲಕ್ಷ್ಮೀಪತಿ, ಪುರುಷೋತ್ತಮ್, ರಾಜಶೇಖರ್, ನವಾಜ್, ಕ್ರೆಸೆಂಟ್ ತಮೀಮ್ಪಾಷ, ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಬಿ.ಸಿ.ನಂದೀಶ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.