Home News ಶಿಡ್ಲಘಟ್ಟ ತಾಲ್ಲೂಕಿನಲ್ಲಿ ೫೦ ಸಾವಿರ ಬೀಜದ ಉಂಡೆ ತಯಾರಿ

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ೫೦ ಸಾವಿರ ಬೀಜದ ಉಂಡೆ ತಯಾರಿ

0

ಹಿಂದೆಲ್ಲಾ ಬೀಜೋತ್ಪಾದನೆ ತನ್ನಿಂದ ತಾನೆ ನಡೆಯುತ್ತಿತ್ತು. ಆದರೆ ಈಗ ಪರಿಸ್ಥಿತಿ ಹಿಂದಿನಂತಿಲ್ಲ. ನೇರವಾಗಿ ಬೀಜ ಒಗೆದರೆ ಅದು ಮೊಳೆಕೆಯೊಡೆಯಲು ಭೂಮಿಯಲ್ಲಿ ಪೋಷ್ಟಿಕಾಂಶ ಸಿಗುವುದಿಲ್ಲ. ಆ ನಿಟ್ಟಿನಲ್ಲಿ ಬೀಜದುಂಡೆ ಮಾಡಲಾಗುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮೋಹನ್‌ ತಿಳಿಸಿದರು.
ತಾಲ್ಲೂಕಿನ ಸಾದಲಿ ಹೋಬಳಿಯಲ್ಲಿ ಬೀಜದುಂಡೆಗಳನ್ನು ತಯಾರಿಸಿದ ನಂತರ ಅವರು ಮಾತನಾಡಿದರು. ತಾಲ್ಲೂಕಿನಲ್ಲಿ ಕಳೆದ ಒಂದು ತಿಂಗಳಿನಿಂದ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಸದಸ್ಯರ ಮೂಲಕ ೫೦,೦೦೦ ಸಾವಿರ ಬೀಜದ ಉಂಡೆ ತಯಾರಿ ಕಾರ್ಯಕ್ರಮವನ್ನು ಪ್ರತಿಗ್ರಾಮ ಮಟ್ಟದಲ್ಲಿ ಮಾಡಲಾಗಿತ್ತು.
ಮಣ್ಣು, ಸಗಣಿ, ಗೋಮೂತ್ರವನ್ನು ಮಿಶ್ರಣ ಮಾಡಿ ಮಣ್ಣಿನ ಉಂಡೆಯನ್ನು ತಯಾರು ಮಾಡಿ ಅದರೊಳಗೆ ಬೀಜವಿಟ್ಟು ಮುಚ್ಚಲಾಗುತ್ತದೆ. ಬೀಜದುಂಡೆಯನ್ನು ಹದವಾದ ಬಿಸಿಲಿನಲ್ಲಿ ಒಂದೆರಡು ದಿನ ಒಣಗಿಸಿ ಮಳೆಗಾಲ ಆರಂಭದಲ್ಲಿ ಅಲ್ಲಲ್ಲಿ ಈ ಬೀಜದುಂಡೆಗಳನ್ನು ಎಸೆಯಲಾಗುತ್ತದೆ. ಮಳೆ ಬಿದ್ದೊಡನೆ ಮಣ್ಣು ತೇವಗೊಂಡು ಬೀಜ ಮೊಳಕೆಯೊಡೆಯುತ್ತದೆ. ಸಸಿಗೆ ಬೇಕಾದಷ್ಟು ಪೋಷ್ಟಿಕಾಂಶ ಸುತ್ತಲೂ ಮೊದಲೇ ತಯಾರಾಗಿರುತ್ತದೆ. ಗಿಡ ಮರವಾಗಿ ಬೆಳೆಯುತ್ತದೆ ಎಂಬುದು ಈ ಸೀಡ್ ಬಾಲ್‌ನ ಉದ್ದೇಶ.
ತಾಲೂಕಿನಲ್ಲಿ ಸಾದಲಿ ಹೋಬಳಿಯಲ್ಲಿ ೧೦ ಸಾವಿರ, ಬಶೆಟ್ಟಹಳ್ಳಿ ಹೋಬಳಿಯಲ್ಲಿ ೮ ಸಾವಿರ, ಶಿಡ್ಲಘಟ್ಟ ನಗರದಲ್ಲಿ ೫ಸಾವಿರ, ಮೇಲೂರು ಹೋಬಳಿ ೧೨ ಸಾವಿರ, ಜಂಗಮಕೋಟೆ ಹೋಬಳಿಯಲ್ಲಿ ೧೫ ಸಾವಿರ ಬೀಜದುಂಡೆ ಸಂಘದ ಸದಸ್ಯರ ಮೂಲಕ ತಯಾರಿಸಿದ್ದು, ಕೆರೆಯ ಸುತ್ತ-ಮುತ್ತ ಖಾಲಿ ಜಾಗದಲ್ಲಿ ಉಂಡೆಯನ್ನು ಬೀಸಾಡಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕರು ಮತ್ತು ಸೇವಾಪ್ರತಿನಿಧಿಗಳು ಹಾಜರಿದ್ದರು.

error: Content is protected !!