ರೈತಮಿತ್ರ ಅಧಿಕಾರಿಯಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸುವ ಜೊತೆಗೆ ಇಲಾಖೆಯ ಸೌಲಭ್ಯಗಳನ್ನು ಒದಗಿಸಿ ರೈತರ ಅಭಿವೃದ್ಧಿಗೆ ಕಾರಣರಾಗಿದ್ದ ಆನಂದ್ ಅವರ ಸೇವೆ ಈ ತಾಲ್ಲೂಕಿಗೆ ಮತ್ತಷ್ಟು ಬೇಕಾಗಿತ್ತು ಎಂದು ಪ್ರಗತಿಪರ ರೈತ ಹಿತ್ತಲಹಳ್ಳಿ ಗೋಪಾಲಗೌಡ ತಿಳಿಸಿದರು.
ನಗರದ ತೋಟಗಾರಿಕೆ ಇಲಾಖೆಯಲ್ಲಿ ಬುಧವಾರ ಸಂಜೆ ನೂತನ ಸಹಾಯಕ ನಿರ್ದೇಶಕರಿಗೆ ಸ್ವಾಗತ ಮತ್ತು ವರ್ಗಾವಣೆಯಾದ ಅಧಿಕಾರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಾಲ್ಲೂಕಿನಾದ್ಯಂತ 150ಕ್ಕೂ ಹೆಚ್ಚು ಪಾಲಿಹೌಸ್ ನಿರ್ಮಾಣವಾಗಿ ಆರ್ಥಿಕವಾಗಿ ಹಲವಾರು ಮಂದಿ ರೈತರು ಮುಂದುವರಿಯಲು ಕಾರಣರಾದ ಆನಂದ್ ಅತ್ಯುತ್ತಮ ಮಾರ್ಗದರ್ಶಕರಾಗಿದ್ದರು. ತೋಟಗಾರಿಕೆ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ಅವರು ಮಾಡಿದ್ದಾರೆ. ನೂತನ ಅಧಿಕಾರಿಗಳು ಸಹ ಅವರಂತೆಯೇ ಕಾರ್ಯನಿರ್ವಹಿಸಿ ಉತ್ತಮ ಹೆಸರುಗಳಿಸಬೇಕೆಂದು ಸಲಹೆ ನೀಡಿದರು.
ಕೃಷಿ ಸಹಾಯಕ ನಿರ್ದೇಶಕ ದೇವೇಗೌಡ ಮಾತನಾಡಿ, ತೋಟಗಾರಿಕೆ ಇಲಾಖೆಯ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಆನಂದ್ ಶ್ರಮವಹಿಸಿದ್ದಾರೆ. ಸರ್ಕಾರಿ ನೌಕರರಿಗೆ ವರ್ಗಾವಣೆ ಮತ್ತು ನಿವೃತ್ತಿ ಸರ್ವೇ ಸಾಮಾನ್ಯ. ಈ ಮಧ್ಯೆ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವ ಮೂಲಕ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗುವುದು ಬಹಳ ಮುಖ್ಯ ಎಂದು ಹೇಳಿದರು.
ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಪ್ಪ ಮಾತನಾಡಿ, ತೋಟಗಾರಿಕೆ ಇಲಾಖೆಯಲ್ಲಿ ಕಳೆದ ಮೂರು ವರ್ಷಗಳಿಂದ ಆನಂದ್ ಉತ್ತಮವಾಗಿ ಸೇವೆ ಸಲ್ಲಿಸಿದ್ದಾರೆ. ಕೃಷಿ,ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಅಧಿಕಾರಿಗಳಾದ ನಾವೆಲ್ಲರು ಸಮನ್ವಯದಿಂದ ಕಾರ್ಯನಿರ್ವಹಿಸಿ ರೈತರಿಗೆ ಮೂರು ಇಲಾಖೆಗಳಿಂದ ಸೌಲಭ್ಯಗಳನ್ನು ಒದಗಿಸಿದ್ದೇವೆ. ಇನ್ನೂ ಎರಡು ಮೂರು ತಿಂಗಳಿನಲ್ಲಿ ಆನಂದ್ ಬಡ್ತಿಯನ್ನು ಹೊಂದಲಿದ್ದು, ಅವರ ಸ್ವಂತ ತಾಲ್ಲೂಕು ಶ್ರೀನಿವಾಸಪುರದಲ್ಲಿ ಕಾರ್ಯನಿರ್ವಹಿಸಲು ಅವಕಾಶ ಲಭಿಸಿರುವುದು ಒಳ್ಳೆಯದು ಎಂದು ಹೇಳಿದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಆನಂದ್ ಮಾತನಾಡಿ, ಸತತ ಬರಗಾಲದಿಂದ ತತ್ತರಿಸುತ್ತಿರುವ ತಾಲೂಕಿನ ರೈತರಿಗೆ ಇಲಾಖೆಯ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಪೂರ್ಣವಾಗಿ ಸಹಕಾರ ನೀಡಿದ್ದಾರೆ. ತಾವು ಸಹ ಪ್ರಾಮಾಣಿಕವಾಗಿ ಪ್ರಯತ್ನ ನಡೆಸಿದ್ದು ಇಲಾಖೆಯ ಯೋಜನೆಗಳ ಅನುಷ್ಠಾನಗೊಳಿಸುವ ಭರದಲ್ಲಿ ಮನಸ್ಸಿಗೆ ನೋವುಂಟು ಮಾಡಿದ್ದಲ್ಲಿ ಕ್ಷಮಿಸಿ ಎಂದರು.
ಈ ಸಂದರ್ಭದಲ್ಲಿ ವರ್ಗಾವಣೆಯಾದ ಸಹಾಯಕ ನಿರ್ದೇಶಕ ಆನಂದ್ ಅವರನ್ನು ಮಾಲಾರ್ಪಣೆ ಮಾಡಿ ಶಾಲುಹೊದಿಸಿ ಸನ್ಮಾನಿಸುವ ಮೂಲಕ ಬೀಳ್ಕೊಡೆಗೆ ನೀಡಲಾಯಿತು. ಹಾಗೆಯೇ ನೂತನ ಸಹಾಯಕ ನಿರ್ದೇಶಕ ಮುನೇಗೌಡ ಅವರನ್ನು ಹೂಗುಚ್ಚ ನೀಡಿ ಸ್ವಾಗತಿಸಲಾಯಿತು.
ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ರವಿಕುಮಾರ್, ನಿತಿನ್ ಮಾತನಾಡಿ ಸಹಾಯಕ ನಿರ್ದೇಶಕ ಆನಂದ್ ಅವರ ಸೇವಾ ಮತ್ತು ಸಹಕಾರ ಮನೋಭಾವವನ್ನು ಪ್ರಶಂಸಿದರು.
ಜಿಲ್ಲಾ ರೈತ ಸಂಘ ಹಾಗೂ ಹಸಿರುಸೇನೆಯ ಖಜಾಂಚಿ ಅಬ್ಲೂಡು ಆರ್.ದೇವರಾಜ್, ಬಚ್ಚರೆಡ್ಡಿ, ಕೆ.ಮುತ್ತಕದಹಳ್ಳಿ ಸುಬ್ಬರೆಡ್ಡಿ, ಬೋದಗೂರು ವೆಂಕಟಸ್ವಾಮಿರೆಡ್ಡಿ, ಕನ್ನಪ್ಪನಹಳ್ಳಿ ನಾರಾಯಣಸ್ವಾಮಿ, ವೆಂಕಟರೆಡ್ಡಿ, ತೋಟಗಾರಿಕೆ ಇಲಾಖೆ ಅಧಿಕಾರಿ ಕೀರ್ತಿ, ಪ್ರಿಯಾಂಕ, ಲಲಿತೇಶ್, ವೀಣಾ, ನಾಗರಾಜ್, ಶಾಂತ ಹಾಜರಿದ್ದರು.