ಕರೋನ ಪರಿಣಾಮದಿಂದಾಗಿ ಶನಿವಾರ ಶಿಡ್ಲಘಟ್ಟ ನಗರದಾದ್ಯಂತ ಬಂದ್ ವಾತಾವರಣವನ್ನು ನಿರ್ಮಾಣ ಮಾಡಿತ್ತು.
ಒಂದೆಡೆ ಸಿನಿಮಾ ಮಂದಿರ, ಶಾಲೆಗಳು ಮುಚ್ಚಿದ್ದವು. ವ್ಯಾಪಾರ ವಹಿವಾಟು ಕುಸಿತ, ಏರು ಬಿಸಿಲಿನ ಪರಿಣಾಮದಿಂದಾಗಿ ರಸ್ತೆಯಲ್ಲಿ ಜನರು ಹೆಚ್ಚಾಗಿ ಕಂಡು ಬರುತ್ತಿರಲಿಲ್ಲ. ಮಾಂಸದಂಗಡಿಗಳು ಸ್ವಯಂಪ್ರೇರಿತರಾಗಿ ಬಾಗಿಲು ಹಾಕಿದ್ದುದು ಕಂಡುಬಂದಿತು. ಅರ್ಧಕ್ಕರ್ಧ ಹೋಟೆಲುಗಳು ವ್ಯಾಪಾರವಿಲ್ಲದೆ ಮುಚ್ಚಿದ್ದರು.
“ಸರ್ಕಾರದಿಂದ ಬಂದ ಆದೇಶದಂತೆ ನಾವು ಕರೋನ ವೈರಸ್ ಬಗ್ಗೆ ಮುನ್ನೆಚ್ಚರಿಕೆ ಹಾಗೂ ಮುಂಜಾಗೃತಾ ಕ್ರಮಗಳ ಕುರಿತಾದ ಕರಪತ್ರಗಳನ್ನು ಊರಲ್ಲೆಲ್ಲಾ ಹಂಚಿದ್ದೇವೆ. ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದೇವೆ. ಫಾಗಿಂಗ್ ಯಂತ್ರಗಳನ್ನು ಸಿದ್ಧಪಡಿಸಿದ್ದು ಸೋಮವಾರದಿಂದ ಅದನ್ನು ಉಪಯೋಗಿಸುತ್ತೇವೆ. ಬೀದಿಬದಿ ವ್ಯಾಪಾರಸ್ಥರಿಗೆ, ತಿಂಡಿ ತಿನಿಸುಗಳನ್ನು ಮಾರುವವರಿಗೆ ಈಗಾಗಲೇ ಎಚ್ಚರಿಕೆ ನೀಡಿದ್ದು, ಸೋಮವಾರದಿಂದ ಅವರನ್ನು ನಿರ್ಬಂಧಿಸಲಾಗುವುದು. ಜನರಲ್ಲಿ ಈಗಾಗಲೇ ಸಾಕಷ್ಟು ತಿಳುವಳಿಕೆ ಮೂಡಿದ್ದು, ಮಾಂಸಾಹಾರ ಮತ್ತು ಹೊರಗಡೆ ತಿನ್ನುವುದನ್ನು ಕಡಿಮೆ ಮಾಡಿದ್ದಾರೆ” ಎಂದು ಪರಿಸರ ಅಭಿಯಂತರ ದಿಲೀಪ್ ತಿಳಿಸಿದರು.
ಕುಸಿದ ರೇಷ್ಮೆ ಗೂಡಿನ ಬೆಲೆ :
ಶಿಡ್ಲಘಟ್ಟದಲ್ಲಿ ಹೆಚ್ಚಿನ ಜನಸಂದಣಿಯಿರುವ ಸ್ಥಳವಾದ ರೇಷ್ಮೆ ಗೂಡಿನ ಮಾರುಕಟ್ಟೆಯು ಜನರಲ್ಲಿ ಅಗೋಚರ ಭಯ, ಆತಂಕ ಇದ್ದರೂ ಎಂದಿನಂತೆ ಶನಿವಾರವೂ ಕಾರ್ಯನಿರ್ವಹಿಸಿತು. ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ಶನಿವಾರ ರೇಷ್ಮೆ ಗೂಡಿನ ಮಾರುಕಟ್ಟೆಗೆ ಹೆಚ್ಚು ರೇಷ್ಮೆ ಗೂಡಿನ ಆವಕವಾಗಿತ್ತು. 700 ಲಾಟ್ ಅಂದರೆ ಸುಮಾರು 35 ಟನ್ ರೇಷ್ಮೆ ಗೂಡು ಬಂದಿದ್ದು, ಬೆಲೆ ಕುಸಿತ ಕಂಡಿತು. ಸರಾಸರಿ ಒಂದು ಕೇಜಿಗೆ 380 ರೂ ಆಯಿತು. ಕಳೆದ ನಾಲ್ಕೈದು ದಿನಗಳ ಹಿಂದಿನವರೆವಿಗೂ ಕಡಿಮೆ ರೇಷ್ಮೆ ಗೂಡಿನ ಆವಕವಾಗುತ್ತಿದ್ದುದರಿಂದ ಹೆಚ್ಚಿದ್ದ ಬೆಲೆಯು, ಶುಕ್ರವಾರ ಕಚ್ಚಾ ರೇಷ್ಮೆಯ ಬೆಲೆ ಕುಸಿತ ಹಾಗೂ ಹೆಚ್ಚಿನ ರೇಷ್ಮೆ ಗೂಡಿನ ಆಗಮನದಿಂದಾಗಿ ದಿಢೀರ್ ಕುಸಿಯಿತು.