Home News ಶೌರ್ಯ ಪ್ರಶಸ್ತಿ ವಿಜೇತ ಬಾಲೆಯರಿಗೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಿಂದ ಪ್ರೋತ್ಸಾಹಧನ

ಶೌರ್ಯ ಪ್ರಶಸ್ತಿ ವಿಜೇತ ಬಾಲೆಯರಿಗೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಿಂದ ಪ್ರೋತ್ಸಾಹಧನ

0

ಸಮಯಸ್ಫೂರ್ತಿಯಿಂದ ಸಹಪಾಠಿಯನ್ನು ರಕ್ಷಿಸಿರುವ ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಬ್ಬರು ಹೆಣ್ಣು ಮಕ್ಕಳು ಕೆಳದಿ ಚನ್ನಮ್ಮ ಶೌರ್ಯ ಪ್ರಶಸ್ತಿಯನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ತಿಳಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶುಕ್ರವಾರ ಕೆಳದಿ ಚನ್ನಮ್ಮ ಶೌರ್ಯ ಪ್ರಶಸ್ತಿ ಪುರಸ್ಕೃತರಾದ ದೀಕ್ಷಿತಾ ಮತ್ತು ಅಂಬಿಕಾ ಅವರಿಗೆ ತಲಾ ಐದು ಸಾವಿರ ರೂ ಪ್ರೋತ್ಸಾಹ ಧನವನ್ನು ನೀಡಿ ಅವರು ಮಾತನಾಡಿದರು.
ಇತರರು ತೊಂದರೆಯಲ್ಲಿದ್ದಾಗ ಸ್ಪಂದಿಸುವ ಗುಣ, ಪರೋಪಕಾರ ಮನೋಭಾವ ಮಕ್ಕಳಿಗೆ ಕಲಿಸಿರುವ ಪೋಷಕರು ಹಾಗೂ ಶಿಕ್ಷಕರು ಅಭಿನಂದನಾರ್ಹರು. ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ಅವರು ಮಕ್ಕಳಿಗೆ ಕಲಿಸಿದ್ದರಿಂದಾಗಿ ಈ ದಿನ ನಾವೆಲ್ಲಾ ಹೆಮ್ಮೆ ಪಡುವಂತಾಗಿದೆ ಎಂದರು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್. ನರಸಿಂಹಯ್ಯ ಮಾತನಾಡಿ, ಇಂದು ಹಲವೆಡೆ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿದೆ. ಅಂಥಹ ಸಂದರ್ಭದಲ್ಲಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ದೀಕ್ಷಿತಾ ಮತ್ತು ಅಂಬಿಕಾ ಅವರ ಸಾಹಸ ಶ್ಲಾಘನೀಯ, ಮಕ್ಕಳ ಸಾಹಸ ಅಭಿನಂದನೀಯ ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷೀನಾರಾಯಣರೆಡ್ಡಿ ಅವರು ಶೌರ್ಯ ಪ್ರಶಸ್ತಿಗೆ ಪಾತ್ರರಾದ ದೀಕ್ಷಿತಾ ಮತ್ತು ಅಂಬಿಕಾ ಅವರನ್ನು ಸನ್ಮಾನಿಸಿ ತಲಾ ೫,೦೦೦ ರೂಗಳನ್ನು ಪ್ರೋತ್ಸಾಹದಾಯಕವಾಗಿ ನೀಡಿದರು.
ಕ್ಷೇತ್ರ ಶಿಕ್ಷಣಾದಿಕಾರಿ ಚಂದ್ರಶೇಖರ್ ಬಾಬು, ಸಿ.ಡಿ.ಪಿ.ಓ ಲಕ್ಷೀದೇವಮ್ಮ, ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಗೋಪಾಲಕೃಷ್ಣಯ್ಯ, ಎಸ್.ಡಿ.ಎಂ.ಸಿ ಅಧ್ಯಕ್ಷ ಜಯರಾಮ್, ಗ್ರಾಮ ಪಂಚಾಯಿತಿ ಸದಸ್ಯರಾದ ಜಯರಾಮ್, ತ್ಯಾಗರಾಜ್, ದೇವಣ್ಣ, ಶಿಕ್ಷಕರಾದ ನಾಗಭೂಷಣ, ರಾಮಕೃಷ್ಣ, ಗಂಗಶಿವಪ್ಪ, ಬಿ.ಆರ್.ಪಿ.ಎಚ್.ವೆಂಕಟರೆಡ್ಡಿ, ಗ್ರಾಮಸ್ಥರಾದ ನಾಗರಾಜು, ಕೃಷ್ಣಮೂರ್ತಿ, ಮುನಿರೆಡ್ಡಿ, ಕೆಂಪರೆಡ್ಡಿ ಹಾಜರಿದ್ದರು.
 

error: Content is protected !!