Home News ಸಂಕಷ್ಟದಲ್ಲಿರುವ ದಲಿತ ಕುಟುಂಬಕ್ಕೆ ಆರ್ಥಿಕ ನೆರವು

ಸಂಕಷ್ಟದಲ್ಲಿರುವ ದಲಿತ ಕುಟುಂಬಕ್ಕೆ ಆರ್ಥಿಕ ನೆರವು

0

ಒಂದೆಡೆ ಮಗನನ್ನು ಕಳೆದುಕೊಂಡ ನೋವು ಮತ್ತೊಂದೆಡೆ ಮಗಳ ಆಸ್ಪತ್ರೆಯ ಖರ್ಚು ಸೇರಿಕೊಂಡು ಸಂಕಷ್ಟದಲ್ಲಿರುವ ಕುಟುಂಬದ ಬಗ್ಗೆ ತಿಳಿದು ಟ್ರಸ್ಟ್‌ ಮೂಲಕ ನೆರವಾಗುತ್ತಿರುವುದಾಗಿ ಎಚ್‌.ಡಿ.ದೇವೇಗೌಡ ಮತ್ತು ಜಯಪ್ರಕಾಶ್‌ ನಾರಾಯಣ್‌ ಸೇವಾಭಿವೃದ್ಧಿ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಮೇಲೂರು ಬಿ.ಎನ್‌.ರವಿಕುಮಾರ್‌ ತಿಳಿಸಿದರು.
ಎಚ್‌.ಡಿ.ದೇವೇಗೌಡ ಮತ್ತು ಜಯಪ್ರಕಾಶ್‌ ನಾರಾಯಣ್‌ ಸೇವಾಭಿವೃದ್ಧಿ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಬುಧವಾರ ಸಂಕಷ್ಟದಲ್ಲಿರುವ ಯಣ್ಣಂಗೂರಿನ ಕುಟುಂಬಕ್ಕೆ ಸೀಮೆ ಹಸು ಹಾಗೂ ನೆರವಿನ ಚೆಕ್‌ ವಿತರಿಸಿ ಅವರು ಮಾತನಾಡಿದರು.
ಹದಿನೈದು ದಿನಗಳ ಹಿಂದೆ ತಾಲ್ಲೂಕಿನ ಬೈರಸಂದ್ರದ ಬಳಿ ನಡೆದ ಅಪಘಾತದಲ್ಲಿ ದಲಿತ ಕುಟುಂಬದ ಮಧುಕುಮಾರ್‌(27) ಮೃತಪಟ್ಟಿದ್ದು, ಅವರ ಸಹೋದರಿ ಸೌಮ್ಯ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಯಸ್ಸಾದ ತಂದೆ ತಾಯಿಯರಾದ ಕೃಷ್ಣಪ್ಪ ಮತ್ತು ನಾರಾಯಣಮ್ಮ ಕುಟುಂಬದ ಆಧಾರವಾಗಿದ್ದ ಇದ್ದೊಬ್ಬ ಗಂಡು ಮಗನನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದರು. ಗ್ರಾಮಸ್ಥರಿಂದ ಈ ವಿಷಯ ತಿಳಿದು ನಮ್ಮ ಟ್ರಸ್ಟ್‌ ಮೂಲಕ ಸುಮಾರು 60 ಸಾವಿರ ರೂಗಳಷ್ಟು ಬಾಳುವ ಸೀಮೆ ಹಸುವನ್ನು ಹಾಗೂ ಆಸ್ಪತ್ರೆಯ ಚಿಕಿತ್ಸೆ ವೆಚ್ಚವಾಗಿ 25 ಸಾವಿರ ರೂಗಳ ಚೆಕ್‌ ನೀಡುತ್ತಿರುವುದಾಗಿ ಅವರು ಹೇಳಿದರು.
ತಾಲ್ಲೂಕು ಪಂಚಾಯ್ತಿ ಸದಸ್ಯ ರಾಜಶೇಖರ್‌, ತಾದೂರು ರಘು, ನಂಜಪ್ಪ, ಗ್ರಾಮ ಪಂಚಾಯ್ತಿ ಸದಸ್ಯರಾದ ರಮೇಶ್‌, ಕೆಂಪರೆಡ್ಡಿ, ರಾಮಾಂಜಿ, ವೀರಪ್ಪ, ಮುಖಂಡರಾದ ಜೆ.ಎಂ.ವೆಂಕಟೇಶ್‌, ಡಿ.ಸಿ.ಚಂದ್ರೇಗೌಡ, ಎಚ್‌.ಕೆ.ಮಂಜುನಾಥ್‌, ನಾರಾಯಣಸ್ವಾಮಿ, ಸುಗಟೂರು ನಂಜೇಗೌಡ ಹಾಜರಿದ್ದರು.

error: Content is protected !!