Home News ಸಂಜಾಯ್ ದಾಸ್ ಗುಪ್ತ ಅವರ ೧೩ನೇ ಪುಣ್ಯ ತಿಥಿ ಕಾರ್ಯಕ್ರಮ

ಸಂಜಾಯ್ ದಾಸ್ ಗುಪ್ತ ಅವರ ೧೩ನೇ ಪುಣ್ಯ ತಿಥಿ ಕಾರ್ಯಕ್ರಮ

0

ತಾಲ್ಲೂಕಿನ ಮುತ್ತೂರು ಗ್ರಾಮದ ಶ್ರೀ ವೀರಾಂಜನೇಯ ಸಮುದಾಯ ಭವನದಲ್ಲಿ ಗ್ರಾಮಾಂತರ ಟ್ರಸ್ಟ್ ಹಾಗೂ ನಮ್ಮ ಮುತ್ತೂರು ಸಂಸ್ಥೆಯ ವತಿಯಿಂದ ಗುರುವಾರ ನಡೆದ ದಿವಂಗತ ಸಂಜಾಯ್ ದಾಸ್ ಗುಪ್ತ ಅವರ ೧೩ನೇ ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಡಾ.ಶಾಂಗೋನ್ ದಾಸ್ ಗುಪ್ತ ಮಾತನಾಡಿದರು.
ಬೆಟ್ಟದ ನೆಲ್ಲಿಕಾಯಿಗೂ ಸಮುದ್ರದ ಉಪ್ಪಿಗೂ ನಂಟಿರುವಂತೆ, ಮುತ್ತೂರಿಗೂ ನಮ್ಮ ಕುಟುಂಬಕ್ಕೂ ಕರುಳಬಳ್ಳಿಯ ಸಂಬಂಧವಿದೆ. ಮುತ್ತೂರಿನವರು ನಮ್ಮನ್ನು ತಮ್ಮವರನ್ನಾಗಿಸಿಕೊಂಡು ಗ್ರಾಮದಲ್ಲಿ ಸಮಾಜಸೇವೆ ಮಾಡಲು ಅನುವು ಮಾಡಿಕೊಟ್ಟಿದ್ದಾರೆ ಎಂದು ಅವರು ಹೇಳಿದರು.
ಹಿಂದೆ ಅವಿಭಾಜ್ಯ ಕೋಲಾರ ಜಿಲ್ಲಾಧಿಕಾರಿಗಳಾಗಿದ್ದ ಸಂಜಾಯ್ ದಾಸ್ ಗುಪ್ತ ಅವರು ಮುತ್ತೂರಿನ ಬಗ್ಗೆ ವಿಶೇಷ ಪ್ರೀತಿಯನ್ನು ಹೊಂದಿದ್ದರು. ೨೦೦೫ ರಲ್ಲಿ ಅವರು ನಿಧನರಾದಾಗ ಮುತ್ತೂರಿನ ಜನರು ತಮ್ಮ ಬಂಧುವಿನ ಅಗಲಿಕೆಯಂತೆ ಭಾವಿಸಿ ಕಂಬನಿ ಮಿಡಿದಿದ್ದರು. ಅಂದಿನಿಂದ ದಿವಂಗತ ಸಂಜಾಯ್ ದಾಸ್ ಗುಪ್ತ ಅವರ ತಾಯಿ, ನಾನು ಹಾಗೂ ಮಕ್ಕಳು ಜೊತೆಗೂಡಿ ಮುತ್ತೂರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ನಿರಂತರವಾಗಿ ಹದಿಮೂರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕೆಲಸಗಳಿಗೆ ಗ್ರಾಮಸ್ಥರು ಬೆಂಬಲಿಸಿದ್ದಾರೆ ಎಂದರು.
ಈ ಹಿಂದೆ ಸಮುದಾಯ ಭವನದ ನಿರ್ಮಾಣಕ್ಕೆ ಎರಡು ಲಕ್ಷ ರೂಗಳನ್ನು ದೇಣಿಗೆಯಾಗಿ ನೀಡಿದ್ದ ಡಾ.ಖದೀಜಾ ದಾಸ್ ಗುಪ್ತ ಅವರು ಸಮುದಾಯ ಭವನದಲ್ಲಿ ಚೇರುಗಳು ಮತ್ತು ಟೇಬಲ್ಲುಗಳನ್ನು ಖರೀದಿಸಲು ಐವತ್ತು ಸಾವಿರ ರೂಗಳನ್ನು ನೀಡಿದರು.
ಗ್ರಾಮಾಂತರ ಟ್ರಸ್ಟ್ ಹಾಗೂ ನಮ್ಮ ಮುತ್ತೂರು ಸಂಸ್ಥೆಯ ಉಷಾ ಶೇಟ್ಟಿ ಮಾತನಾಡಿ, ಸಂಜಾಯ್ ದಾಸ್ ಗುಪ್ತ ಅವರ ವ್ಯಕ್ತಿತ್ವ ರೂಪುಗೊಳ್ಳೂವಲ್ಲಿ ಅವರ ಪೋಷಕರ ಪಾತ್ರ ಪ್ರಮುಖವಾದದ್ದು. ಅವರ ತಾಯಿ ಡಾ.ಖದೀಜಾ ದಾಸ್ ಗುಪ್ತ ಲಕ್ನೌ ನಗರದ ಉನ್ನತ ಕುಟುಂಬದ ಹಿನ್ನೆಯವರು. ಚಿಕ್ಕ ವಯಸ್ಸಿನಲ್ಲಿಯೇ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೈಲು ಸೇರಿದ್ದರು. ತಮ್ಮ ಪತಿ ಅನಿರುದ್ಧ್ ದಾಸ್ ಗುಪ್ತ ಬೆಂಬಲದಿಂದ ಉನ್ನತ ವಿದ್ಯಾಭ್ಯಾಸ ಮಾಡಿ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಇವರ ಒಬ್ಬನೇ ಮಗ ಸಂಜಾಯ್ ದಾಸ್ ಗುಪ್ತ ಪೋಷಕರಂತೆಯೇ ಸಾಮಾಜಿಕ ಸುಧಾರಣೆಗಳ ಆಶೋತ್ತರ ಹೊಂದಿದ್ದರು. ಅವರ ನಿಧನದ ನಂತರ ಅವರ ಕುಟುಂಬ ಆ ಕೆಲಸ ಮಾಡುತ್ತಿದೆ ಎಂದರು.
ಎ.ಟಿ. ವೇಣುಗೋಪಾಲ ಕೃಷ್ಣಮಾಚಾರ್ ಅವರು ತಾವು ಮುತ್ತೂರಿನ ಇತಿಹಾಸದ ಕುರಿತಾಗಿ ಬರೆದ ಹಸ್ತಪ್ರತಿಯನ್ನು ಪುಸ್ತಕರೂಪದಲ್ಲಿ ಹೊರತರುವಂತೆ ಡಾ.ಶಾಂಗೋನ್ ದಾಸ್ ಗುಪ್ತ ಅವರಿಗೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಟ್ರಸ್ಟ್ ಹಾಗೂ ನಮ್ಮ ಮುತ್ತೂರು ಸಂಸ್ಥೆಯ ಕೆಲಸಗಳಿಗೆ ಸಹಕರಿಸುತ್ತಿರುವ ಸ್ವಯಂಸೇವಕರು, ಶಿಕ್ಷಕರು, ಮಹಿಳೆಯರನ್ನು ಗೌರವಿಸಲಾಯಿತು.
ಗ್ರಾಮದ ಹಿರಿಯರಾದ ಎಂ.ಎಸ್.ವೆಂಕಟೇಶಮೂರ್ತಿ, ಬೈರಾರೆಡ್ಡೀ, ಕೆಂಪೇಗೌಡ, ಗೋಪಾಲಪ್ಪ, ಬೈರೇಗೌಡ, ಸೂರಪ್ಪ, ಎಂ.ಕೆ.ವೆಂಕಟೇಶಮೂರ್ತಿ, ಸರ್ಕಾರಿ ಶಾಲೆಯ ಶಿಕ್ಷಕರು ಹಾಜರಿದ್ದರು.

error: Content is protected !!