ಆಧುನಿಕ ಜಮಾನದ ಹೆಸರಿನಲ್ಲಿ ಸಂಸ್ಕಾರ ಮರೆಯುವುದು ಒಳಿತಲ್ಲ. ಪರಸ್ಪರ ಪ್ರೀತಿ, ಗೌರವ ಭಾವನೆಗಳನ್ನು ಉಳಿಸಿಕೊಳ್ಳಬೇಕು. ಗುರು-ಶಿಷ್ಯರ ನಡುವಿನ ಬಾಂಧವ್ಯ ಕುಸಿಯಬಾರದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎ-.ಹುಣಸೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಭಾರತೀಯ ಮಾನವ ಹಕ್ಕುಗಳ ಜಾಗೃತಿ ವೇದಿಕೆ ಮತ್ತು ಗ್ರಾಮದ ಹಳೆಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರಿಸರ ಕಾಳಜಿ, ಹಿರಿಯರ ಆದರ್ಶ, ರಾಷ್ಟ್ರಪ್ರೇಮ, ಪರಂಪರೆಯ ಅರಿವು, ಸಾಮಾಜಿಕ ಬದ್ಧತೆ, ಶಿಸ್ತು, ಸಾಮಾಜಿಕ ಕಳಕಳಿ, ಸಾರ್ವಜನಿಕ ಆಸ್ತಿಯ ಬಗ್ಗೆ ಗೌರವ ಮುಂತಾದ ಅಂಶಗಳನ್ನು ಮೈಗೂಡಿಸಿಕೊಂಡಲ್ಲಿ ಯಾವುದೇ ಉದ್ಯೋಗ, ವ್ಯಾಪಾರ, ವಹಿವಾಟನ್ನು ನಡೆಸಿದರೂ ಮಾದರಿಯಾಗುತ್ತೀರಿ. ಶಿಷ್ಯರು ಉತ್ತಮ ನಾಗರಿಕರಾಗುವುದೇ ಗುರುವಿಗೆ ನೀಡುವ ಉನ್ನತ ಕಾಣಿಕೆ ಎಂದು ಹೇಳಿದರು.
ಶಾಲಾ ವಾರ್ಷಿಕೋತ್ಸವಗಳೂ ಮತ್ತು ಇಂತಹ ಗುರುವಂದನಾ ಕಾರ್ಯಕ್ರಮಗಳು ಕೇವಲ ಖಾಸಗಿ ಶಾಲೆಗಳಿಗೆ ಮಾತ್ರ ಸೀಮತವಾಗದಂತೆ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ ರಚಿಸಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸರ್ಕಾರಿ ಶಾಲೆಗಳ ಉಳಿವಿಗಾಗಿ ಯುವಕರು ಮುಂದಾಗಿರುವುದು ಶ್ಲಾಘನೀಯ ಎಂದರು.
ಗುರುವಂದನಾ ಕಾರ್ಯಕ್ರಮದ ಅಂಗವಾಗಿ ಗ್ರಾಮದಲ್ಲಿ ರಂಗೋಲಿ ಸ್ಪರ್ಧೆ ಹಾಗೂ ಭಾರತೀಯ ಮಾನವ ಹಕ್ಕುಗಳ ಜಾಗೃತಿ ವೇದಿಕೆ ವತಿಯಿಂದ ಯುವಕರಿಗೆ ವಾಲೀಬಾಲ್ ಪಂದ್ಯಾವಳಿ ಮತ್ತು ಶಾಲಾ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ವಿ.ಶಿವಣ್ಣ, ಮಾನವ ಹಕ್ಕುಗಳ ಜಾಗೃತಿ ವೇದಿಕೆ ಅಧ್ಯಕ್ಷ ಮಲ್ಲೇಶ್, ಉಪಾಧ್ಯಕ್ಷ ಅನಂತಪದ್ಮಯ್ಯ, ಸಿಆರ್ಪಿ ಬಿ.ವಿ.ಮಂಜುನಾಥ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ, ಗ್ರಾಮ ಪಂಚಾಯಿತಿ ಸದಸ್ಯರಾದ ಅನಸೂಯಮ್ಮ, ಆನಂದ್, ಮುಖಂಡರಾದ ಮುನಿಕೃಷ್ಣ, ರಾಮಾಂಜಿ ಹಾಜರಿದ್ದರು.