ಕೊಳಚೆ ನಿರ್ಮೂಲನಾ ಮಂಡಳಿಯಿಂದ ಬಂದಿದ್ದ ಆದೇಶದ ಅನ್ವಯ ನಗರಸಭೆ ಸಭಾಂಗಣದಲ್ಲಿ ಬುಧವಾರ ಕರೆಯಲಾಗಿದ್ದ ತುರ್ತು ಸಭೆಯನ್ನು ಜೆಡಿಎಸ್ ಹಾಗೂ ಕಾಂಗ್ರೆಸ್ನ ಸುಮಾರು ೨೩ ಸದಸ್ಯರು ಬಹಿಷ್ಕರಿಸಿ ಹೊರನಡೆದ ಘಟನೆ ನಡೆದಿದೆ.
ಕೊಳಚೆ ನಿರ್ಮೂಲನೆ ಮಂಡಳಿಯಿಂದ ನಗರದ ಕೊಳಚೆ ಪ್ರದೇಶದಲ್ಲಿ ಆಗಿರುವ ನಿವೇಶನಗಳನ್ನು ತುರ್ತಾಗಿ ಖಾತೆಗಳನ್ನು ಮಾಡುವ ಮೂಲಕ ನಗರಸಭೆಗೆ ಬರಬೇಕಾಗಿರುವ ಆದಾಯದ ಮೂಲಗಳನ್ನು ಹೆಚ್ಚಿಸುವ ಉದ್ದೇಶದಿಂದ ನಗರಸಭೆ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್ ಅಧ್ಯಕ್ಷತೆಯಲ್ಲಿ ಬುಧವಾರ ಸಭೆ ಕರೆಯಲಾಗಿತ್ತು.
ಸಭೆಯಲ್ಲಿ ಕ್ಷೇತ್ರದ ಶಾಸಕ ಎಂ.ರಾಜಣ್ಣ ಅವರೂ ಭಾಗವಹಿಸಿದ್ದು ಅವರ ಎದುರಿನಲ್ಲೆ ಅವರದೇ ಜೆಡಿಎಸ್ ಪಕ್ಷದ ಸದಸ್ಯರು ಸೇರಿದಂತೆ ಕಾಂಗ್ರೆಸ್ನ ಸುಮಾರು ೨೩ ಮಂದಿ ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಹೊರನಡೆದರು.
ನಗರಸಭೆಯ ಬಹುತೇಕ ವಾರ್ಡುಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸುವಂತೆ ಅನೇಕ ಬಾರಿ ಸದಸ್ಯರಾದ ನಾವು ಮನವಿಗಳನ್ನು ಕೊಟ್ಟಿದ್ದರೂ ನಾಲ್ಕು ತಿಂಗಳಿನಿಂದ ನಗರಸಭೆಯಲ್ಲಿ ಸಾಮಾನ್ಯ ಸಭೆಯನ್ನು ಕರೆದು ಚರ್ಚೆ ಮಾಡಿಲ್ಲ. ನಗರಸಭೆಯಲ್ಲಿ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲು ಹೆಚ್ಚು ಪ್ರಾದಾನ್ಯತೆ ನೀಡದೆ ಇದೀಗ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಬಂದಿರುವ ಪತ್ರವೊಂದಕ್ಕೆ ತುರ್ತು ಸಭೆ ಕರೆಯುವಂತಹ ಅಗತ್ಯವೇನಿದೆ ಎಂದು ಸದಸ್ಯರು ಪ್ರಶ್ನಿಸಿದ್ದಾರೆ.
ನಾವು ಅಭಿವೃದ್ಧಿ ಕೆಲಸಗಳಿಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ, ಸಮಸ್ಯೆಗಳನ್ನು ಹೇಳಿಕೊಂಡರೂ ಸ್ಪಂದಿಸದೆ, ಏಕಾಏಕಿ ತುರ್ತುಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ನಮ್ಮ ಸಮಸ್ಯೆಗಳನ್ನು ಕೇಳದಿದ್ದರೆ ನಾವ್ಯಾಕೆ ಸಭೆಯಲ್ಲಿರಬೇಕು, ನಾವು ಸಭೆಯಿಂದ ಹೊರಹೋಗುತ್ತೇವೆಂದು ತಿಳಿಸಿ ಸಭೆ ಬಹಿಷ್ಕರಿಸಿದ್ದೇವೆ ಎಂದು ಸದಸ್ಯರು ಆಕ್ರೋಶದಿಂದ ನುಡಿದರು.
‘ಸರ್ಕಾರದಿಂದ ಸುತ್ತೋಲೆ ಬಂದಿರುವುದರಿಂದ ತುರ್ತು ಸಭೆ ಕರೆಯಲಾಗಿತ್ತು. ಆದರೆ ನಗರಸಭೆ ಸದಸ್ಯರು ತುರ್ತು ಸಭೆಗೆ ಸ್ಪಂದಿಸದೇ ಸಭೆಯಿಂದ ಹೊರನಡೆದಿದ್ದಾರೆ. ಮುಂದಿನ ೧೦ ದಿನಗಳಲ್ಲಿ ನಗರಸಭೆ ಸಾಮಾನ್ಯ ಸಭೆ ನಡೆಸಿ ಎಲ್ಲಾ ಸಮಸ್ಯೆಗಳ ಕುರಿತು ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು’ ಎಂದು ನಗರಸಭೆ ಪ್ರಬಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್ ತಿಳಿಸಿದರು.
‘ನಗರಸಭೆ ಸದಸ್ಯರು ತುರ್ತುಸಭೆಯ ಹಿನ್ನೆಲೆ ಅರ್ಥ ಮಾಡಿಕೊಂಡಿಲ್ಲ, ಕೊಳಚೆ ನಿರ್ಮೂಲನೆ ಮಂಡಳಿಯಿಂದ ಈಗಾಗಲೇ ನಗರದ ಕೊಳಚೆ ಪ್ರದೇಶದಲ್ಲಿ ನಿವೇಶನಗಳನ್ನು ಮಾಡಿದ್ದು ಇವುಗಳ ಖಾತೆಗಳನ್ನು ಮಾಡಿಸುವುದರಿಂದ ನಗರಸಭೆಗೆ ಆದಾಯ ಬರುತ್ತದೆ. ಸಭೆಯಲ್ಲಿ ನಗರಸಭೆ ಸದಸ್ಯರು ರೇಜುಲೇಷನ್ ಮಾಡಿಕಳುಹಿಸಿದರೆ ಅನುಕೂಲವಾಗಲಿದೆ. ರಾಜಕೀಯ ದುರುದ್ದೇಶದಿಂದ ಕೆಲ ಸದಸ್ಯರು ಸಭೆಗೆ ಸಹಕಾರ ನೀಡಿಲ್ಲ’ ಎಂದು ಶಾಸಕ ಎಂ.ರಾಜಣ್ಣ ನುಡಿದರು.