Home News ಸಯ್ಯದ್‌ ಸರ್ಮಸ್ತ್‌ ಹುಸೇನಿ ಷಾವಾಲಿ ದರ್ಗಾದಲ್ಲಿ ಗಂಧದ ಅಭಿಷೇಕ

ಸಯ್ಯದ್‌ ಸರ್ಮಸ್ತ್‌ ಹುಸೇನಿ ಷಾವಾಲಿ ದರ್ಗಾದಲ್ಲಿ ಗಂಧದ ಅಭಿಷೇಕ

0

ಪಟ್ಟಣದ ಗಾರ್ಡನ್‌ ರಸ್ತೆಯಲ್ಲಿರುವ ಸುಮಾರು ಏಳುನೂರು ವರ್ಷಗಳ ಇತಿಹಾಸವಿರುವ ಪುರಾತನ ಸಯ್ಯದ್‌ ಸರ್ಮಸ್ತ್‌ ಹುಸೇನಿ ಷಾವಾಲಿ ದರ್ಗಾದಲ್ಲಿ ಗಂಧದ ಅಭಿಷೇಕವನ್ನು ಬುಧವಾರ ರಾತ್ರಿ ಆಯೋಜಿಸಲಾಗಿತ್ತು.
ಗಂಧದ ಅಭಿಷೇಕದ ನಿಮಿತ್ತ ಉಚಿತವಾಗಿ ಬಡಮಕ್ಕಳಿಗೆ ಸಾಮೂಹಿಕ ಸುನ್ನತಿ, ವೈದ್ಯಕೀಯ ಚಿಕಿತ್ಸೆ ಮತ್ತು ಅನ್ನಸಂತರ್ಪಣೆಯನ್ನು ಆಯೋಜಿಸಿದ್ದರು.
ಉಚಿತ ವೈದ್ಯಕೀಯ ಚಿಕಿತ್ಸೆ ಮತ್ತು ನೆರವು ಕಾರ್ಯಕ್ರಮದಲ್ಲಿ ನಾನ್ನೂರು ಮಂದಿ ಚಿಕಿತ್ಸೆ ಪಡೆದುಕೊಂಡರು. ಬೆಂಗಳೂರು ಬಿಜಾಪುರ ಮತ್ತು ಮೈಸೂರಿನಿಂದ ಆಗಮಿಸಿದ್ದ ವೈದ್ಯರು ಚಿಕಿತ್ಸೆ ನೀಡಿ ರೋಗಿಗಳಿಗೆ ಉಚಿತವಾಗಿ ಔಷಧಿಗಳನ್ನು ವಿತರಿಸಿದರು. ಸುಮಾರು 20 ಮಂದಿ ಬಡ ಮಕ್ಕಳಿಗೆ ಸುನ್ನತಿಯನ್ನು ಉಚಿತವಾಗಿ ವೈದ್ಯರಿಂದ ಮಾಡಿಸಲಾಯಿತು. ನಂತರ ಸುನ್ನತಿ ಮಾಡಿಸಿಕೊಂಡ ಮಗುವಿಗೆ ಅಕ್ಕಿ, ತುಪ್ಪ, ಬಟ್ಟೆ, ಗೋದಿ, ಬೆಲ್ಲ, ಕೊಬ್ಬರಿಗಳನ್ನು ದರ್ಗಾ ಸಮಿತಿಯ ವತಿಯಿಂದ ನೀಡಲಾಯಿತು.
ರಾತ್ರಿ ನಡೆದ ಗಂಧದ ಅಭಿಷೇಕ್ಕೆ ದರ್ಗಾವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ಗಂಧವನ್ನು ಅಭಿಷೇಕ ಮಾಡಿ ಮಲ್ಲಿಗೆ ಹೂಗಳಿಂದ ಅಲಂಕರಿಸಿದ ಚಾದರ್‌ ಹೊದಿಸಿದ ನಂತರ ಧರ್ಮಗುರುಗಳು ಸಯ್ಯದ್‌ ಸರ್ಮಸ್ತ್‌ ಹುಸೇನಿ ಷಾವಾಲಿ ಅವರಿಗೆ ಪ್ರಾರ್ಥನೆಯನ್ನು ಸಲ್ಲಿಸಿದರು. ಈ ಸಂರ್ಭದಲ್ಲಿ ಖವ್ವಾಲಿಯನ್ನು ಹಾಗೂ ಪ್ರಾರ್ಥನಾ ಗೀತೆಗಳು ವಾದ್ಯದೊಂದಿಗೆ ಹಾಡುಗಾರರು ಹಾಡಿ ಮಲ್ಲಿಗೆ ಕಂಪಿನೊಂದಿಗೆ ತಮ್ಮ ಕಂಠದ ಇಂಪನ್ನೂ ಸೇರಿಸಿದರು.
ಸಯ್ಯದ್‌ ಸರ್ಮಸ್ತ್‌ ಹುಸೇನಿ ಷಾವಾಲಿ ದರ್ಗಾ ಸಮಿತಿ ಮುಖಂಡರಾದ ಹಫೀಜುಲ್ಲಾ, ಷಫೀಯುಲ್ಲಾ, ಆಜಂಖಾನ್‌, ಸರ್ದಾರ್‌ಖಾನ್‌, ಗುರುಗಳಾದ ನೂರ್‌ ಮೌಲಾ ಹಾಜರಿದ್ದರು.

error: Content is protected !!