Home News ಸರ್ಕಾರದಿಂದ ಅನುದಾನಕ್ಕಾಗಿ ಅರ್ಚಕರ ಮನವಿ

ಸರ್ಕಾರದಿಂದ ಅನುದಾನಕ್ಕಾಗಿ ಅರ್ಚಕರ ಮನವಿ

0

ತಾಲ್ಲೂಕು ಅರ್ಚಕರ ಸಂಘದ ಸದಸ್ಯರು ತಮ್ಮ ಸಮಸ್ಯೆಗಳನ್ನು ವಿವರಿಸಿ ಸರ್ಕಾರದಿಂದ ಅನುದಾನವನ್ನು ಕೊಡಿಸುವಂತೆ ಕೋರಿ ಶನಿವಾರ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದ ಮೂರ್ತಿ ಅವರಿಗೆ ಮನವಿಯನ್ನು ಸಲ್ಲಿಸಿದರು.
ನಗರದ ಮುತ್ತೂರು ಬೀದಿಯ ರಾಘವೇಂದ್ರಸ್ವಾಮಿ ದೇವಾಲಯದಲ್ಲಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮ ಮಂಡಳಿ ವತಿಯಿಂದ ಬಡ ಬ್ರಾಹ್ಮಣರಿಗೆ, ಅರ್ಚಕರಿಗೆ ಮತ್ತು ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆಂದು 50 ದಿನಸಿ ಕಿಟ್ ಗಳನ್ನು ತಂದು ವಿತರಿಸಿದ ಸಂದರ್ಭದಲ್ಲಿ ಅರ್ಚಕರು ತಮ್ಮ ತೊಂದರೆಗಳನ್ನು ಹೇಳಿಕೊಂಡರು.
ದೇವಸ್ಥಾನಗಳನ್ನು ತೆರೆಯುವಂತಿಲ್ಲವಾದುದರಿಂದ ಪುರೋಹಿತರು, ಆಗಮಿಕರು, ಉಪಾಂತರು ಯಾವುದೇ ಆದಾಯವಿಲ್ಲದೆ ಆರ್ಥಿಕವಾಗಿ ಜರ್ಜರಿತರಾಗಿದ್ದಾರೆ. ಇದಲ್ಲದೇ ಮುಜಾರಾಯಿ ಹೊರತುಪಡಿಸಿದಂತೆ ಬೇರೆ ದೇವಾಲಯಗಳಲ್ಲಿನ ಅರ್ಚಕರು ಮತ್ತು ಸಹಾಯಕರೂ ತೊಂದರೆಗೊಳಗಾಗಿದ್ದಾರೆ. ದಯಮಾಡಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮ ಮಂಡಳಿಯಿಂದ ಮತ್ತು ಸರ್ಕಾರದಿಂದ ಆರ್ಥಿಕ ನೆರವನ್ನು ಒದಗಿಸಿಕೊಡಬೇಕೆಂದು ಅರ್ಚಕರ ಸಂಘದವರು ವಿನಂತಿಸಿಕೊಂಡರು.
ಮನವಿಯನ್ನು ಸ್ವೀಕರಿಸಿದ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದ ಮೂರ್ತಿ ಅವರು ಮಾತನಾಡಿ, “ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮ ಮಂಡಳಿಯಲ್ಲಿಯೇ 30 ಕೋಟಿ ಹಣವಿದೆ. ಮುಖ್ಯಮಂತ್ರಿಗಳ ಅನುಮತಿ ಪಡೆದು ಲಾಕ್ ಡೌನ್ ಮುಗಿದ ನಂತರ ಅರ್ಚಕರು ಹಾಗೂ ಬಡ ಬ್ರಾಹ್ಮಣರ ಅಭಿವೃದ್ಧಿಗೆ ಯೋಜನೆಯನ್ನು ರೂಪಿಸಲಾಗುವುದು. ಸರ್ಕಾರದಿಂದಲೂ ಅನುದಾನ ಕೊಡಿಸಲು ಪ್ರಯತ್ನಿಸುತ್ತೇನೆ. ಶಿಡ್ಲಘಟ್ಟಕ್ಕೆ ಸಧ್ಯ 80 ದಿನಸಿ ಕಿಟ್ ವಿತರಿಸಿದ್ದು, ಇನ್ನೂ ಅಗತ್ಯವಿದ್ದಲ್ಲಿ ಕಳಿಸಿಕೊಡುತ್ತೇನೆ” ಎಂದು ಹೇಳಿದರು.
ತಾಲ್ಲೂಕು ಅರ್ಚಕರ ಸಂಘದ ಅಧ್ಯಕ್ಷ ವೈ.ಎನ್.ದಾಶರಥಿ, ಜಿಲ್ಲಾ ಉಪಾಧ್ಯಕ್ಷ ಶಿವಗುರುಶರ್ಮ, ಜಿಲ್ಲಾ ಬ್ರಾಹ್ಮಣ ಮಹಾಸಭಾ ಮಾಜಿ ಅಧ್ಯಕ್ಷ ಎಂ.ವಾಸುದೇವರಾವ್, ತಾಲ್ಲೂಕು ಅಧ್ಯಕ್ಷ ಎ.ಎಸ್.ರವಿ. ಶ್ರೀಕಾಂತ್, ಮುರಳಿ, ವಿ.ಕೃಷ್ಣ, ರಾಮಮೋಹನಶಾಸ್ತ್ರಿ, ಸತ್ಯನಾರಾಯಣರಾವ್, ಬಿ.ಕೃಷ್ಣಮೂರ್ತಿ ಹಾಜರಿದ್ದರು.