ಸರ್ಕಾರಗಳು ಬದಲಾದರೆ ಸಾಲದು ಬದಲಿಗೆ ಸರ್ಕಾರದ ನೀತಿ, ಧೋರಣೆಗಳು ಬದಲಾದರೆ ಮಾತ್ರ ಕಾರ್ಮಿಕರ ಹಾಗೂ ದುಡಿಯುವ ವರ್ಗಕ್ಕೆ ನ್ಯಾಯ ಸಿಗುವಂತಾಗುತ್ತದೆ ಎಂದು ಸಿಪಿಐ (ಎಂ) ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಹೇಳಿದರು.
ನಗರದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಗ್ರಾಮ ಪಂಚಾಯತಿ ನೌಕರರ ೨ ನೇ ತಾಲ್ಲೂಕು ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶಾದ್ಯಂತ ಶೇ. ೯೫ ರಷ್ಟು ಮಂದಿ ನೌಕರರು ಅಸಂಘಟಿತರಾಗಿದ್ದು ರಾಷ್ಟ್ರ ಹಾಗೂ ರಾಜ್ಯದಲ್ಲಿ ಅಧಿಕಾರ ನಡೆಸಿದ ಮತ್ತು ನಡೆಸುತ್ತಿರುವ ಯಾವುದೇ ಸರ್ಕಾರಕ್ಕೂ ಕಾರ್ಮಿಕರ ಪರ ಕಾಳಜಿಯಿಲ್ಲ. ಈವರೆಗೂ ಕಾರ್ಮಿಕ ವರ್ಗದವರಿಗೆ ಏನಾದರೂ ಅಲ್ಪ ಸ್ವಲ್ಪ ಪ್ರಯೋಜನವಾಗಿದೆ ಎಂದರೆ ಅದು ಕೇವಲ ಕಾರ್ಮಿಕರ ಹೋರಾಟದ ಫಲದಿಂದ ಲಭಿಸಿದ್ದೇ ಹೊರತು ಯಾವುದೇ ರಾಜಕೀಯ ಪಕ್ಷದ ತೀರ್ಮಾನದಿಂದಲ್ಲ ಎಂದರು.
ರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಾರ್ಮಿಕ ವಿರೋಧಿಯಾಗಿದೆ. ಇನ್ನು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮೂರು ವರ್ಷ ಕಳೆಯಿತಾದರೂ ಅಸಂಘಟಿತ ಕಾರ್ಮಿಕ ವಲಯದ ಯಾವುದೇ ಬೇಡಿಕೆ ಈಡೇರಿಸಲಿಲ್ಲ ಎಂದರು.
ಚುನಾವಣೆ ಸಮಯದಲ್ಲಿ ನಾನು ಅಹಿಂದ ವರ್ಗದ ಪ್ರತಿನಿಧಿ ಎಂದೇ ಬಿಂಬಿಸಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ಅಹಿಂದ ವರ್ಗದ ಜನತೆಗೆ ಯಾವ ಕೊಡುಗೆ ಕೊಟ್ಟಿದ್ದಾರೆ. ದಲಿತ ಮುಖ್ಯಮಂತ್ರಿ ಕೂಗೆಬ್ಬಿಸಿ ಜನರನ್ನು ದಿಕ್ಕು ತಪ್ಪಿಸುತ್ತಿರುವ ಗೃಹಮಂತ್ರಿ ಡಾ.ಜಿ.ಪರಮೇಶ್ವರ್ ತಮ್ಮ ಅಧಿಕಾರಾವಧಿಯಲ್ಲಿ ದಲಿತರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳು ಸೇರಿದಂತೆ ಅನ್ಯಾಯದ ವಿರುದ್ಧ ಯಾಕೆ ಧ್ವನಿ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು.
ರಾಜಕೀಯ ತೀರ್ಮಾನವೇ ಅಂತಿಮವಾಗಿರುವುದರಿಂದ ಕಾರ್ಮಿಕರ ಸಮಸ್ಯೆಗಳನ್ನು ಅಧಿವೇಶನದಲ್ಲಿ ಚರ್ಚಿಸಿ ಕಾರ್ಮಿಕರ ಪರ ತೀರ್ಮಾನ ಕೈಗೊಳ್ಳಬೇಕಾದ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕಾರ್ಮಿಕರ ಹಾಗು ದುಡಿಯುವ ವರ್ಗದ ಕಲ್ಯಾಣ ಸಾಧ್ಯವಿಲ್ಲ, ಹಾಗಾಗಿ ದುಡಿಯುವ ವರ್ಗದಿಂದ ಒಂದಷ್ಟು ಜನರನ್ನು ಚುನಾಯಿತರನ್ನಾಗಿ ಆಯ್ಕೆ ಮಾಡಿ ಕಳುಹಿಸಿದಾಗ ಮಾತ್ರ ಅಸಂಘಟಿತ ಕಾರ್ಮಿಕರ ಸಮಸ್ಯೆ ಪರಿಹಾರವಾಗುತ್ತದೆ ಎಂದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಿದೇವಮ್ಮ ಮಾತನಾಡಿ, ಆಳುವ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಯಿಂದ ಈವರೆಗೂ ಗಮ ಪಂಚಾಯತಿ ನೌಕರರು ಸೇರಿದಂತೆ ಅಸಂಘಟಿತ ಕಾರ್ಮಿಕರಿಗೆ ನಿಗಧಿತ ಕೂಲಿ, ಸಮಯ ಸೇರಿದಂತೆ ಭದ್ರತೆಯಿಲ್ಲವಾಗಿದೆ ಎಂದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದುಡಿಯುವ ವರ್ಗದ ಪರ ಕೆಲಸ ಮಾಡುವುದನ್ನು ಬಿಟ್ಟು ಆರ್ಥಿಕವಾಗಿ ಬಲಾಢ್ಯರಾಗಿರುವ ಶ್ರೀಮಂತರ ಪರ ಕೆಲಸ ಮಾಡುತ್ತಿದೆ. ಯಾವುದೇ ದಯೆ, ದಾಕ್ಷಿಣ್ಯದಿಂದ ಕೂಲಿ ಕಾರ್ಮಿಕರ ಸಮಸ್ಯೆ ಪರಿಹಾರವಾಗುವುದಿಲ್ಲ. ಹಾಗಾಗಿ ಹೋರಾಟದ ಮೂಲಕವೇ ನಮಗೆ ಸಿಗಬೇಕಾದ ಸವಲತ್ತುಗಳನ್ನು ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ನೌಕರರು ಸೇರಿದಂತೆ ಎಲ್ಲಾ ಅಸಂಘಟಿತ ಕಾರ್ಮಿಕರೂ ಒಗ್ಗಟ್ಟಾಗಿ ಹೋರಾಟಕ್ಕಿಳಿಯಬೇಕು ಎಂದರು.
ಹಮಾಲಿ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಆಂಜನೇಯರೆಡ್ಡಿ, ಜಿಲ್ಲಾ ಖಜಾಂಚಿ ಮುಸ್ತಾಫ್, ಸಿಐಟಿಯು ತಾಲ್ಲೂಕು ಅಧ್ಯಕ್ಷ ಸುದರ್ಶನ್, ಕಾರ್ಯದರ್ಶಿ ಪಾಪಣ್ಣ, ಮುಖಂಡರಾದ ಜನಾರ್ಧನ್, ಶಂಕರಪ್ಪ, ಮುನೀಂದ್ರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.