Home News ಸರ್ಕಾರಿ ಗುಂಡು ತೋಪಿನ ಒತ್ತುವರಿ ತೆರವು ಕಾರ್ಯಾಚರಣೆ

ಸರ್ಕಾರಿ ಗುಂಡು ತೋಪಿನ ಒತ್ತುವರಿ ತೆರವು ಕಾರ್ಯಾಚರಣೆ

0

ತಾಲ್ಲೂಕಿನ ವೀರಾಪುರ ಗ್ರಾಮಕ್ಕೆ ತಹಶೀಲ್ದಾರ್ ಎಸ್.ಅಜಿತ್ ಕುಮಾರ್ ರೈ ಹಾಗೂ ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್ ಗುರುವಾರ ಭೇಟಿ ನೀಡಿ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕೇಂದ್ರದ ಸುತ್ತಲೂ ಇದ್ದ ಸರ್ಕಾರಿ ಗುಂಡು ತೋಪಿನ ಒತ್ತುವರಿ ತೆರವು ಕಾರ್ಯವನ್ನು ವೀಕ್ಷಿಸಿದರು.
ಗ್ರಾಮದ ಕೆಲವರು ಸರ್ಕಾರಿ ಗುಂಡು ತೋಪಿನಲ್ಲಿ ಗುಡಿಸಲು ಬಚ್ಚಲು ಮನೆಗಳನ್ನು ನಿರ್ಮಿಸಿದ್ದರು. ಗುಂಡಿ ನಿರ್ಮಾಣ ಮಾಡಿ ಕಸದ ತಿಪ್ಪೆ ಮಾಡಿಕೊಂಡಿದ್ದರು. ದನಕರುಗಳ ದೊಡ್ಡಿಯನ್ನು ಕೂಡ ನಿರ್ಮಿಸಿಕೊಂಡಿದ್ದರು.
ಈ ಎಲ್ಲ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದ್ದು ಇನ್ನುಳಿದ ಅಲ್ಪ ಸ್ವಲ್ಪ ಒತ್ತುವರಿನ್ನು ತೆರವುಗೊಳಿಸಿ ಎರಡು ದಿನಗಳಲ್ಲಿ ಗುಂಡು ತೋಪಿನ ನಾಲ್ಕೂ ದಿಕ್ಕುಗಳಲ್ಲಿ ಗುರುತಿನ ಕಲ್ಲುಗಳನ್ನು ನೆಡುವಂತೆ ಭೂ ಮಾಪಕರಿಗೆ ತಿಳಿಸಿದರು.
ಒತ್ತುವರಿ ತೆರವು ಮುಗಿಯುತ್ತಿದ್ದಂತೆ ಸುತ್ತಲೂ ಫೆನ್ಸಿಂಗ್ ಅಥವಾ ಕಾಂಪೌಂಡ್ ನಿರ್ಮಿಸಿ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಆಟದ ಮೈದಾನಕ್ಕೆ ಆ ಸ್ಥಳವನ್ನು ಮೀಸಲು ಇಡುವಂತೆ ಗ್ರಾಮಪಂಚಾಯಿತಿ ಪಿಡಿಒ ರಮಾಕಾಂತ್ ಅವರಿಗೆ ಸೂಚಿಸಿದರು.
ದನದ ಕೊಟ್ಟಿಗೆ ಹಾಗೂ ಗುಡಿಸಲು ಮನೆಯೊಂದು ಉಳಿದುಕೊಂಡಿದ್ದು ಅದರ ಮಾಲೀಕರಿಗೆ ಕೂಡಲೆ ಅದನ್ನು ತೆರವುಗೊಳಿಸಬೇಕು ಇಲ್ಲವಾದರೆ ಕ್ರಿಮಿನಲ್ ಕೇಸು ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.
ನಂತರ ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಧ್ಯಾಹ್ನದ ಬಿಸಿಯೂಟವನ್ನು ಪರಿಶೀಲಿಸಿದರು. ಎಷ್ಟು ಮಂದಿ ವಿದ್ಯಾರ್ಥಿಗಳು ಬರುತ್ತಿದ್ದಾರೆ, ಅಡುಗೆ ಏನು ಎಂಬುದರ ಬಗ್ಗೆ ಶಿಕ್ಷಕರಿಂದ ವಿವರ ಪಡೆದರು.
ಎಸ್‌ಡಿಎಂಸಿ ಅಧ್ಯಕ್ಷ ಗಂಗರಾಜ್, ಶಿಕ್ಷಕಿ ನಿರ್ಮಲ, ಗಾಮ ಲೆಕ್ಕಿಗರಾದ ಲಕ್ಷ್ಮೀನಾರಾಯಣ್, ಗ್ರಾಮದ ಮುಖಂಡರಾದ ಸಿ.ರಾಮಣ್ಣ, ಮುನಿನಂಜಪ್ಪ, ಲಕ್ಷ್ಮೀಪತಿ, ಆರ್.ಶ್ರೀನಿವಾಸ್, ಮಣಿ, ರಾಮಾಂಜಿ, ಮುನಿರಾಜು ಹಾಜರಿದ್ದರು.

error: Content is protected !!