ಸ್ಕೌಟ್ಸ್ ಮತ್ತು ಗೈಡ್ಸ್ ಪಕ್ಷಾತೀತ ಸಂಸ್ಥೆಯಾಗಿದ್ದು, ಜಾತಿ, ಧರ್ಮಗಳನ್ನು ಮೀರಿದ ವೈಚಾರಿಕ ಪ್ರಜ್ಞೆ ಮೂಡಿಸುವ ಸಂಸ್ಥೆಯಾಗಿದೆ. ಇಲ್ಲಿನ ಚಟುವಟಿಕೆಗಳು ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿವೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಚಂದ್ರಾನಾಯಕ್ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಸ್ವಾಮಿ ವಿವೇಕಾನಂದ ರೋವರ್ಸ್ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಸ್ತು ಹಾಗೂ ಸಹನೆ ರೂಢಿಸಿಕೊಳ್ಳಲು ಸ್ಕೌಟ್ಸ್ ಮತ್ತು ಗೈಡ್ಸ್ ಅತ್ಯುತ್ತಮ ವೇದಿಕೆ. ವಿದ್ಯಾರ್ಥಿಗಳನ್ನು ವಿಶ್ವ ಮಾನವರನ್ನಾಗಿ ಸಜ್ಜುಗೊಳಿಸುತ್ತದೆ, ಅವರಲ್ಲಿ ಸೇವಾ ಮನೋಭಾವ ಜಾಗೃತಿಗೊಳಿಸುತ್ತದೆ. ಪ್ರಕೃತಿಯ ಪರಿಸರದಲ್ಲಿ ನಿಂತ ಬೆಟ್ಟ, ಹರಿಯುವ ನದಿ, ಹಾರಾಡುವ ಹಕ್ಕಿ, ಅಡ್ಡಾಡುವ ಪ್ರಾಣಿಗಳು, ಸುಳಿಯುವ ಗಾಳಿ, ಇತ್ಯಾದಿಗಳನ್ನು ನೋಡಿ ಕಲಿಯುವ, ಅವುಗಳೊಡನೆ ಆಡಿ ನಲಿಯುವ ಅವಕಾಶಗಳನ್ನು ಕಲ್ಪಿಸಿಕೊಂಡು ಸ್ಕೌಟ್ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಹೇಳಿದರು.
ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಡಿ.ಎಸ್.ಮನೋಹರ್ ಮಾತನಾಡಿ, ಯುವಕರು ದೈಹಿಕ, ಬೌದ್ಧಿಕ, ಸಾಮಾಜಿಕ, ದೈವಿಕವಾಗಿ ಪೂರ್ಣ ಪ್ರಮಾಣದ ಉನ್ನತಿಯನ್ನು ಸಾಧಿಸುವುದು, ಅಲ್ಲದೆ ಪ್ರಾದೇಶಿಕ, ರಾಷ್ಟ್ರೀಯ, ಅಂತರ ರಾಷ್ಟ್ರೀಯ ಮಟ್ಟದ ಹೊಣೆಗಾರಿಕೆಯುಳ್ಳ ವ್ಯಕ್ತಿಗಳಾಗಿ ರೂಪುಗೊಳ್ಳುವಂತೆ ಮಾಡುವ ಉದ್ದೇಶದಿಂದ ಶಾಲಾ ಕಾಲೇಜುಗಳಲ್ಲಿ ಘಟಕಗಳನ್ನು ಪ್ರಾರಂಭಿಸಲಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಪ್ರಾದೇಶಿಕ ಹಿತದ ಜೊತೆಗೆ, ದೇಶದ ಅಭಿವೃದ್ಧಿಗೆ, ಮತ್ತು ಅಂತರರಾಷ್ಟ್ರೀಯ ಶಾಂತಿ -ಸೌಹಾರ್ದತೆ, ಸಹಬಾಳ್ವೆಗೆ, ಸಹೋದ್ಯೋಗಿಗಳೊಂದಿಗೆ ಗೌರವಯುತ ನಡತೆಗೆ ಮತ್ತು ಜಗತ್ತಿನ ಪ್ರಾಕೃತಿಕ ಪರಿಸರಕ್ಕೆ ಹೊಂದಿಕೊಳ್ಳುವ, ಪರಸ್ಪರ ಸಹಕರಿಸುವ ಬದ್ಧತೆಯನ್ನು ಹೊಂದಿರಬೇಕು ಎಂದು ಹೇಳಿದರು.
ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ಎ.ಎಸ್.ಓ.ಸಿ ಎ.ಎಮ್.ಶಂಕರ್, ಜಿಲ್ಲಾ ತರಬೇತಿ ಆಯುಕ್ತ ಸಿ.ಬಿ.ಪ್ರಕಾಶ್, ಹೇಮಾಕುಮಾರಿ, ರೋವರ್ಸ್ ಘಟಕಾಧಿಕಾರಿ ಡಾ.ಮುರಳಿ ಆನಂದ್, ವೆಂಕಟೇಶ್, ರಮೇಶ್, ವೆಂಕಟರಮಣಪ್ಪ, ಶಿವಕುಮಾರ್, ಛಾಯಣ್ಣ ಹಾಜರಿದ್ದರು.