Home News ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯಿತಿಯಿಂದ ‘ಮಲ್ಟಿ ಪರ್ಪಸ್‌ ಹಾಲ್‌’

ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯಿತಿಯಿಂದ ‘ಮಲ್ಟಿ ಪರ್ಪಸ್‌ ಹಾಲ್‌’

0

ಜಿಲ್ಲಾ ಪಂಚಾಯಿತಿಯಿಂದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಂಪ್ಯೂಟರ್‌ ಲ್ಯಾಬ್‌, ಪ್ರೊಜೆಕ್ಟರ್‌ ಮತ್ತು ಗ್ರಂಥಾಲಯವನ್ನೊಳಗೊಂಡ ‘ಮಲ್ಟಿ ಪರ್ಪಸ್‌ ಹಾಲ್‌’ ರೂಪಿಸುವ ಯೋಜನೆಯಿದೆ. ಸ್ಥಳಾವಕಾಶ ನೀಡಿದಲ್ಲಿ ಚೀಮಂಗಲ ಸರ್ಕಾರಿ ಪ್ರೌಢಶಾಲೆಯಿಂದಲೇ ಈ ಯೋಜನೆಯನ್ನು ಪ್ರಾರಂಭಿಸೋಣ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್‌.ವಿ.ಮಂಜುನಾಥ್‌ ತಿಳಿಸಿದರು.
ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕ ಡಾ.ಎಂ.ಶಿವಕುಮಾರ್‌ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಶಿಕ್ಷಕ ಡಾ.ಎಂ.ಶಿವಕುಮಾರ್‌ ಅವರು ನಮ್ಮ ರಾಜ್ಯಕ್ಕೆ, ಶಿಕ್ಷಕ ಬಾಂಧವರಿಗೆಲ್ಲಾ ಹೆಮ್ಮೆಯನ್ನು ತಂದಿದ್ದಾರೆ. ಇಂಥಹ ಸರ್ಕಾರಿ ಶಿಕ್ಷಕರ ಸಂಖ್ಯೆ ಹೆಚ್ಚಾಗಲಿ ಎಂದರು.
‘ಸರ್ಕಾರಿ ಶಾಲೆಯಲ್ಲಿಯೇ ಓದಿದವರು ನಾವು. ನಿಮ್ಮೊಂದಿಗೆ ಇರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗುರುದತ್‌ ಹೆಗಡೆಯವರು ಕನ್ನಡ ಮಾಧ್ಯಮದಲ್ಲಿ ಓದಿ ಐ.ಎ.ಎಸ್‌ ನಲ್ಲಿ 25 ನೇ ರ್ಯಾಂಕ್‌ ಪಡೆದಿದ್ದಾರೆ. ನಮ್ಮ ಜಿಲ್ಲೆಯ ಕೀರ್ತಿ ಹೆಚ್ಚಿಸಿರುವ ಸರ್‌.ಎಂ.ವಿ., ಡಾ.ಎಚ್‌.ನರಸಿಂಹಯ್ಯ, ಡಾ.ಸಿ.ಎನ್‌.ಆರ್‌. ರಾವ್‌ ಎಲ್ಲರೂ ಕನ್ನಡ ಮಾಧ್ಯಮದಲ್ಲಿ ಓದಿದವರಾಗಿದ್ದಾರೆ. ಮಕ್ಕಳು ಇಂಥಹವರಿಂದ ಸ್ಫೂರ್ತಿ ಪಡೆದು ಸಾಧಕರಾಗಿ’ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗುರುದತ್‌ ಹೆಗಡೆ ಮಾತನಾಡಿ, ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕ ಡಾ.ಎಂ.ಶಿವಕುಮಾರ್‌ ಅವರನ್ನು ಅಭಿನಂದಿಸಲೆಂದೇ ಬಂದೆವು. ಶಾಲೆಗೆ ಏನೇ ಅಗತ್ಯವಿದ್ದರೂ ಪಟ್ಟಿ ಮಾಡಿಕೊಡಿ. ನಮ್ಮಿಂದ ಸಾಧ್ಯವಾದಷ್ಟೂ ಅನುಕೂಲ ಮಾಡಿಕೊಡುತ್ತೇವೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಂಕ್‌ ಮುನಿಯಪ್ಪ, ತನುಜಾ ರಘು, ಮುಖ್ಯ ಲೆಕ್ಕಾಧಿಕಾರಿ ಎಂ.ಎಚ್‌.ನಾಗೇಶ್‌, ಸಹಾಯಕ ಯೋಜನಾಧಿಕಾರಿ ಎನ್‌.ಮುನಿರಾಜು, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್‌, ಸದಸ್ಯ ಪರಮಶಿವಯ್ಯ, ಮುಖ್ಯ ಶಿಕ್ಷಕ ಎಸ್‌.ಶಿವಶಂಕರ್‌, ಶಿಕ್ಷಕರಾಸ ಎಚ್‌.ಎಸ್‌.ವಿಠಲ್‌, ಎ.ವಿ.ನವೀನ್‌ಕುಮಾರ್‌, ಬಿ.ಸಿ.ದೊಡ್ಡನಾಯಕ್‌, ಶಿವಕುಮಾರ್‌, ಟಿ.ಇ.ಶ್ರೀನಿವಾಸ, ಪಿ.ಸವಿತಾ ಹಾಜರಿದ್ದರು.

error: Content is protected !!