Home News ಸರ್ಕಾರಿ ಶಾಲೆಗಳು ಮುಚ್ಚುವುದೆಂದರೆ ಪ್ರಜಾಪ್ರಭುತ್ವದ ಅಂತಃಸತ್ವವೇ ಸತ್ತುಹೋದಂತೆ

ಸರ್ಕಾರಿ ಶಾಲೆಗಳು ಮುಚ್ಚುವುದೆಂದರೆ ಪ್ರಜಾಪ್ರಭುತ್ವದ ಅಂತಃಸತ್ವವೇ ಸತ್ತುಹೋದಂತೆ

0

ಶಾಲಾ ಕಾಲೇಜುಗಳಲ್ಲಿ ಕನ್ನಡವನ್ನು ಮುಖ್ಯ ಭಾಷೆಯಾಗಿ ಓದುವುದು ಹೆಚ್ಚೂ ಕಡಿಮೆ ನಿಂತೇ ಹೋಗುತ್ತಿದೆ. ಇನ್ನು ಹತ್ತು ವರ್ಷಗಳಲ್ಲಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡದಲ್ಲಿ ಕಲಿತೆ ಎಂದು ಹೇಳುವವರು ಸಿಗದಂತಾಗಲಿದೆ. ಅಷ್ಟು ವೇಗವಾಗಿ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಸರ್ಕಾರಿ ಶಾಲೆಗಳು ಮುಚ್ಚುವುದೆಂದರೆ ಪ್ರಜಾಪ್ರಭುತ್ವದ ಅಂತಃಸತ್ವವೇ ಸತ್ತುಹೋದಂತೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ಆತಂಕ ವ್ಯಕ್ತಪಡಿಸಿದರು.
ನಗರದ ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ಗುರುವಾರ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದೊಂದಿಗೆ ತಾಲ್ಲೂಕು ಕಸಾಪ ಮತ್ತು ಡಾಲ್ಫಿನ್ ಪದವಿ ಪೂರ್ವ ಕಾಲೇಜು ನಡೆಸಿದ ‘ನನ್ನ ಮೆಚ್ಚಿನ ಪುಸ್ತಕ’ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಪುಸ್ತಕಗಳನ್ನು ಕೊಂಡು ಕಪಾಠಿನಲ್ಲಿಟ್ಟರೆ ಕನ್ನಡ ಬೆಳೆಯುವುದಿಲ್ಲ. ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಯುವಜನತೆಯಲ್ಲಿ ಬೆಳೆಸದಿದ್ದರೆ ಕನ್ನಡಕ್ಕೆ ಉಳಿಗಾಲವಿಲ್ಲ. ಮೌಲ್ಯಯುತವಾದ ಕೃತಿಗಳನ್ನು ಓದಲಿಕ್ಕೆ ವಿದ್ಯಾರ್ಥಿ ಯುವಜನರು ತಯಾರಿದ್ದಾರೆ. ಅವರಿಗೆ ಬೇಕಾದ ವೇದಿಕೆಗಳನ್ನು ನಾವು ಕಲ್ಪಿಸಬೇಕಿದೆ ಎಂದು ಹೇಳಿದರು.
ಕಾಲೇಜುಗಳಲ್ಲಿ ಅಂಕಗಳಿಕೆಯ ಕಡೆ ಒತ್ತು ನೀಡಲಾಗುತ್ತಿದೆ. ಅಂಕಗಳಿಕೆ ಮುಖ್ಯವಾದರೂ ಅದು ಕೇವಲ ಒಂದು ಕಾಲಿನ ನಡಿಗೆ ಮಾತ್ರ. ಕೇವಲ ರ್ಯಾಂಕ್ ಅಥವಾ ಅಂಕಗಳಿಸಿದ ವಿದ್ಯಾರ್ಥಿಗಳು ದೇಶವನ್ನು ಕಟ್ಟಲಾರರು. ವಿದ್ಯೆಯೊಂದಿಗೆ ವಿವೇಕವೂ ಇರಬೇಕು. ಒಳ್ಳೆಯ ಶಿಕ್ಷಣ ಪಡೆದಾಗ ಕೌಶಲ್ಯವಂತರಾಗುತ್ತಾರೆ. ಕೌಶಲ್ಯವಂತರಾದಷ್ಟೇ ಸಾಲದು. ಇವುಗಳೊಂದಿಗೆ ವ್ಯಕ್ತಿತ್ವ ಬೆಳೆಸುವ ಶಿಕ್ಷಣದ ಅಗತ್ಯವಿದೆ. ವಿದ್ಯೆ ಮತ್ತು ವ್ಯಕ್ತಿತ್ವ ಎರಡೂ ಒಟ್ಟಾದಾಗ ಮಾತ್ರ ಸುಸಂಸ್ಕೃತ ದೇಶ ಕಟ್ಟಲು ಸಾಧ್ಯ. ಕೇವಲ ನಾಗರಿಕರಾದರಷ್ಟೇ ಸಾಲದು ಸುಸಂಸ್ಕೃತರಾಗಬೇಕು.
ದಿಟ್ಟ ವ್ಯಕ್ತಿತ್ವ, ಪಕ್ವತೆಯುಳ್ಳ ವಿವೇಕಿಗಳಾಗದಿದ್ದರೆ ಇರುವ ಕೌಶಲ್ಯವನ್ನು ಸರಿಯಾಗಿ ಬಳಸಲು ಸಾಧ್ಯವಾಗದು. ಅದಕ್ಕಾಗಿಯೇ ಹೆಚ್ಚು ಓದಿದವರೂ ಆತ್ಮಹತ್ಯೆ ಮಾಡಿಕೊಳ್ಳುವ ನಿದರ್ಶನಗಳು ನಮ್ಮ ಮುಂದಿವೆ. ಅದನ್ನು ತಪ್ಪಿಸಲು ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೂಡ ಕನ್ನಡ ಸಾಹಿತ್ಯ, ಇತಿಹಾಸ, ಪರಂಪರೆಯ ಪಠ್ಯಗಳನ್ನು ನಿಗದಿ ಪಡಿಸಬೇಕು. ಆಗ ಪೂರ್ಣ ವ್ಯಕ್ತಿತ್ವ ಬೆಳೆಯುತ್ತದೆ ಎಂದು ನುಡಿದರು.
ಪುಸ್ತಕ ಓದಿ ಕೆಟ್ಟವರಿಲ್ಲ. ಓದು ಆಲೋಚನೆಗೆ ಹಚ್ಚುತ್ತದೆ. ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಂದ ಶೈಕ್ಷಣಿಕ ಪ್ರಗತಿ ಕುಂಠಿತವಾಗುವುದಿಲ್ಲ. ಬದಲಿಗೆ ವಿದ್ಯಾರ್ಥಿಗಳಲ್ಲಿ ಸ್ಪಂದನಶೀಲತೆ ಹೆಚ್ಚುತ್ತದೆ. ಅವರ ಜ್ಞಾನವೂ ಬೆಳೆಯುತ್ತದೆ, ಮೌಲ್ಯಯುತವಾದ ಮನಸ್ಸಿಗೆ ಶಿಕ್ಷಣ ಕೊಡುವ ವೇದಿಕೆಗಳು ಶಾಲಾ ಕಾಲೇಜುಗಳಲ್ಲಿ ನಿರ್ಮಾಣವಾಗಬೇಕು ಎಂದರು.
ಸಾಹಿತಿ ಸ.ರಘುನಾಥ ಪ್ರಸ್ತಾವಿಕವಾಗಿ ಮಾತನಾಡಿ ಕನ್ನಡ ಪುಸ್ತಕ ಪ್ರಾಧಿಕಾರದ ಕಾರ್ಯಕ್ರಮಗಳ ವಿವರ ಮತ್ತು ಉದ್ದೇಶವನ್ನು ವಿವರಿಸಿದರು.
ತಾವು ಓದಿದ ಪುಸ್ತಕಗಳ ಬಗ್ಗೆ ಮಾತನಾಡಿದ ಹತ್ತು ವಿದ್ಯಾರ್ಥಿನಿಯರಲ್ಲಿ ಪ್ರಥಮ ಸ್ಥಾನ ಪಡೆದ ಸಂಪದ, ದ್ವಿತೀಯ ಸ್ಥಾನ ಪಡೆದ ದೀಕ್ಷಿತ ಮತ್ತು ತೃತೀಯ ಸ್ಥಾನ ಪಡೆದ ಚೈತ್ರಾ ಅವರಿಗೆ ತಾಲ್ಲೂಕು ಕಸಾಪ ವತಿಯಿಂದ ಪುಸ್ತಕ ಮತ್ತು ಪ್ರಮಾಣಪತ್ರವನ್ನು ನೀಡಲಾಯಿತು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಸಮಾಧಾನಕರ ಬಹುಮಾನವಾಗಿ ಪುಸ್ತಕ ಮತ್ತು ಪ್ರಮಾಣಪತ್ರವನ್ನು ನೀಡಲಾಯಿತು.
ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಉಪಾಧ್ಯಕ್ಷ ಎನ್.ಅಶೋಕ್, ಸಾಹಿತಿ ಸ.ರಘುನಾಥ, ಪ್ರಾಂಶುಪಾಲ ಶ್ರೀನಿವಾಸರೆಡ್ಡಿ, ಎಸ್.ವಿ.ನಾಗರಾಜರಾವ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಪ್ರತಿ ಕಾಲೇಜಿನಲ್ಲೂ ‘ಪುಸ್ತಕ ಪ್ರೇಮಿ ವಿದ್ಯಾರ್ಥಿ ಬಳಗ’:ಶಿಕ್ಷಣ ಇಲಾಖೆಯ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿದ್ದೇನೆ. ಇನ್ನು ಮುಂದೆ ಪ್ರತಿ ಕಾಲೇಜಿನಲ್ಲೂ ‘ಪುಸ್ತಕ ಪ್ರೇಮಿ ವಿದ್ಯಾರ್ಥಿ ಬಳಗ’ ಇರಬೇಕೆಂದು ಆದೇಶ ಮಾಡುತ್ತಾರೆ. ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರತಿ ವರ್ಷ ಆಯಾ ಕಾಲೇಜುಗಳಿಗೆ 60 ಸಾವಿರ ರೂಗಳವರೆಗೆ ಎಂಟು ಕಾರ್ಯಕ್ರಮಗಳು ನಡೆಸಲು ನೀಡಲಾಗುವುದು. ಅದರ ಮೂಲಕ ಆಯಾ ಕಾಲೇಜುಗಳಲ್ಲಿ ನಿರಂತರವಾಗಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ಆಶಯ ವ್ಯಕ್ತಪಡಿಸಿದರು.