ಸಹಾಯ ಎಂಬುದು ಸರಪಣಿಯಂತೆ ಸಾಗಬೇಕು. ನಾವು ಈ ದಿನ ನಿಮಗೆ ಮಾಡುತ್ತಿರುವ ಅಲ್ಪ ಸಹಾಯಕ್ಕೆ ಪ್ರತಿಯಾಗಿ ನೀವು ಮುಂದೆ ಉನ್ನತ ಸ್ಥಾನಗಳನ್ನು ಅಲಂಕರಿಸಿದಾಗ ಆಗಿನ ಮಕ್ಕಳಿಗೆ ನೆರವಾಗಿ ಎಂದು ‘ವಿ ಆರ್ ಟು ಹೆಲ್ಪ್’ ಸಂಸ್ಥೆಯ ಅಮಿತ್ ತಿಳಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ‘ವಿ ಆರ್ ಟು ಹೆಲ್ಪ್’ ಸಂಸ್ಥೆಯ ವತಿಯಿಂದ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್‌ಪುಸ್ತಕ, ಪ್ಯಾಡ್, ಲೇಖನ ಸಾಮಗ್ರಿ, ಬಣ್ಣದ ಕ್ರೆಯಾನ್ಸ್, ಸಿಹಿ ತಿನಿಸನ್ನು ವಿತರಿಸಿ ಅವರು ಮಾತನಾಡಿದರು.
ಗ್ರಾಮಾಂತರ ಪ್ರದೇಶದಲ್ಲಿ ಓದಿ ಈಗ ಬೆಂಗಳೂರಿನಲ್ಲಿ ಎಂಜಿನಿಯರುಗಳಾಗಿರುವ ಸಮಾನ ಮನಸ್ಕ ತಂಡವನ್ನು ರಚಿಸಿಕೊಂಡು ಪ್ರತಿವರ್ಷ ಆಯ್ದ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ನೀಡುತ್ತಿದ್ದೇವೆ. ಸಮಾಜಕ್ಕೆ ನಾವು ತೀರಿಸಬೇಕಾದ ಋಣ ಬಲು ದೊಡ್ಡದಿದೆ. ಆದಷ್ಟೂ ಸಮಾಜಮುಖಿಗಳಾಗೋಣ ಎಂದು ಹೇಳಿದರು.
ತಾಲ್ಲೂಕಿನ ವೀರಾಪುರ, ಹನುಮಂತಪುರ, ವರದನಾಯಕನಹಳ್ಳಿ ಸರ್ಕಾರಿ ಶಾಲೆಗಳು ಹಾಗೂ ಆಶಾಕಿರಣ ಅಂಧಮಕ್ಕಳ ಶಾಲೆಗೆ ಈ ದಿನ ಸಗತ್ಯ ವಸ್ತುಗಳನ್ನು ವಿತರಿಸಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ‘ವಿ ಆರ್ ಟು ಹೆಲ್ಪ್’ ಸಂಸ್ಥೆಯ ಸದಸ್ಯರು ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಟ್ಟರು.
‘ವಿ ಆರ್ ಟು ಹೆಲ್ಪ್’ ಸಂಸ್ಥೆಯ ಸುಶ್ಮಿತ, ಪ್ರೀತಿಕಾ, ವಾಗೇಶ್, ವನಿತಾ, ಸ್ವಾತಿ, ಸರಬ್ಜಿತ, ರೂಪ, ಅಕಿನಿ, ಶಾಲಾ ಶಿಕ್ಷಕರು ಈ ಸಂದರ್ಭದಲ್ಲಿ ಹಾಜರಿದ್ದರು.